ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಾರ್ವಜನಿಕರು ಮತ್ತು ಅಂಗಡಿಕಾರರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಸಂಪೂರ್ಣವಾಗಿ ಹದಗೆಟ್ಟ ಮಂಗಳವಾರ ಪೇಟೆ ರಸ್ತೆ: ಸಾರ್ವಜನಿಕರಿಗೆ, ಅಂಗಡಿಕಾರರಿಗೆ ತೊಂದರೆ
ರಬಕವಿ-ಬನಹಟ್ಟಿ,ನ6: ಸ್ಥಳೀಯ ಮಂಗಳವಾರ ಪೇಟೆಯ ನಗರದ ಅತ್ಯಂತ ಪ್ರಮುಖ ಪೇಟೆಯಾಗಿದೆ. ಈ ಪೇಟೆಯ ರಸ್ತೆಯಲ್ಲಿ ಹುಡುಕಾಡಿದರೂ ಕೂಡಾ ಡಾಂಬರ್ ರಸ್ತೆ ಕಣ್ಣಿಗೆ ಕಾಣುವುದಿಲ್ಲ. ಈ ರಸ್ತೆ ಅಷ್ಟೊಂದು  ಹದಗೆಟ್ಟಿದೆ.
ನಗರದಲ್ಲಿ ನಡೆಯುತ್ತಿರುವ ಒಳ ಚರಂಡ ಯೋಜನೆ ಮತ್ತು 24*7 ನೀರು ಪೂರೈಕೆಯ ಯೋಜನೆಯಿಂದಾಗಿ ಈ ರಸ್ತೆಯು ಸಂಪೂರ್ಣವಾಘಿ ಹದಗೆಟ್ಟಿವೆ. ಇದರಿಂದಾಗಿ ಇಲ್ಲಿಯ ಸಾರ್ವಜನಿಕರು ಮತ್ತು ಅಂಗಡಿಕಾರರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ರಸ್ತೆಯ ತುಂಬ ಅಪಾರ ಪ್ರಮಾಣದ ಕಲ್ಲುಗಳಿವೆ. ಇದರಿಂದಾಗಿ ದ್ವಿಚಕ್ರ ವಾಹನ ಚಾಲಕರಿಗೆ ಮತ್ತು ಹಿರಿಯರಿಗೆ ಬಹಳಷ್ಟು ತೊಂದರೆಯಾಗಿದೆ. ಬಹಳಷ್ಟು ಜನರು ಹದಗೆಟ್ಟ ರಸ್ತೆಯಿಂದಾಗಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇನ್ನೂ ಕಲ್ಲುಗಳು ವಾಹನಗಳ ಗಾಲಿಗಳಿಂದ ಜನರಿಗೆ ಮತ್ತು ಅಂಗಡಿಕಾರರಿಗೆ ಸಿಡಿದ ಪರಿಣಾಮವಾಗಿ ಅನೇಕರು ಗಾಯ ಮಾಡಿಕೊಂಡಿದ್ದಾರೆ.
ಸ್ಥಳೀಯ ಗಾಂಧಿ ವೃತ್ತದಿಂದ ಅರುಣ ಚಿತ್ರ ಮಂದಿರದವರೆಗಿನ ಈ ರಸ್ತೆ ಆದಷ್ಟು ಬೇಗನೆ ದುರಸ್ತಿಯಾಗಬೇಕಿದೆ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಕಡೆಗೆ ಗಮನ ನೀಡಬೇಕು ಎಂದು ಇಲ್ಲಿಯ ವ್ಯಾಪಾರಸ್ಥರು ಮತ್ತು ನಿವಾಸಿಗಳಾದ ಶಂಕರ ಕೆಸರಗೊಪ್ಪ, ಗಜಾನನ ಮುಳೆ, ಪ್ರಕಾಶ ಮಂಡಿ, ಸಚಿನ್ ಕಾಸರ, ಈಶ್ವರ ಪಟ್ಟಣ, ಶ್ರೀಶೈಲ ಸಜ್ಜನ, ಶಿವು ಧಬಾಡಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ