ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಮಕ್ಕಳ ಹಕ್ಕುಗಳ ದಿನಾಚರಣೆ ಕುರಿತು ಕಾನೂನು ಅರಿವು ಮತ್ತು ನೆರವು ನ್ಯಾಯಾಧೀಶೆ ರೇಶ್ಮಾ ಗೋಣಿ ಉದ್ಘಾಟಿಸಿದರು.
ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ
ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಬಾರದು
ರಬಕವಿ-ಬನಹಟ್ಟಿ,ನ18: ಯಾವುದೆ ಮಗು ಶಿಕ್ಷಣದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಕೊಡುವುದರಿಂದ ಮಕ್ಕಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತವೆ ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.
ಅವರು ಬುಧವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಮಕ್ಕಳ ಹಕ್ಕುಗಳ ದಿನಾಚರಣೆ ಕುರಿತು ಹಮ್ಮಿಕೊಳ್ಳಲಾದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮಕ್ಕಳ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳು ಮಾಡಿದ ಅಪರಾಧಗಳಿಗೆ ನ್ಯಾಯಾಲಯ ಕೂಡಾ ಶಿಕ್ಷೆ ನೀಡುವಂತಿಲ್ಲ. ಮಕ್ಕಳು ಸರ್ವತೋಮುಖ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಗೋಣಿ ತಿಳಿಸಿದರು.
ವಕೀಲ ವೆಂಕಟೇಶ ನಿಂಗಸಾನಿ ಮಾತನಾಡಿ, 6 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿದೆ. ಮಕ್ಕಳ ಶೋಷಣೆ ಮಾಡಬಾರದು. ಮಕ್ಕಳನ್ನು ಯಾವುದೆ ಕಾರ್ಖಾನೆಯಲ್ಲಿ ದುಡಿಸಿಕೊಳ್ಳುವಂತಿಲ್ಲ, ಬಾಲ್ಯ ವಿವಾಹ, ಮಕ್ಕಳ ಲೈಂಗಿಕ ಶೋಷಣೆ, ಭಿಕ್ಷಾಟನೆಗಳನ್ನು ತಡೆಗಟ್ಟಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ, ಜಮಖಂಡಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುರಾಧಾ ಹಾದಿಮನಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಉಪ ತಹಶೀಲ್ದಾರ್ ಎಸ್.ಎಲ್.ಕಾಗಿಯವರ, ಶಿರಸ್ತೆದಾರ ಬಸವರಾಜ ಬಿಜ್ಜರಗಿ ಇದ್ದರು.
ಶಿವಕುಮಾರ ಷಣ್ಮುಖ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್.ಎ.ಪಾಟೀಲ, ತಳವಾರ, ಪ್ರಕಾಶ ವಂದಾಲ, ದಾನೇಶ್ವರಿ ಆಲಗೂರ, ದೀಪಾ ಖವಾಸಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು

Social Plugin