ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿಗೆ ಆಗಮಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಯಿತು.
ರಬಕವಿ ಬನಹಟ್ಟಿ ನಡೆಯದ ತರಗತಿಗಳು
120 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ
ರಬಕವಿ-ಬನಹಟ್ಟಿ,ನ18: ಕೋವಿಡ್-19 ಸಂದರ್ಭದಲ್ಲಿ ಕಾಲೇಜು ಆರಂಭಗೊಳ್ಳುತ್ತಿದ್ದು, ಉಪನ್ಯಾಸಕರು, ಸಿಬ್ಬಂದಿ ವರ್ಗದವರ ಮತ್ತು ವಿದ್ಯಾರ್ಥಿಗಳು ತಮ್ಮದೆ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅರಿತು ನಡೆಯುವುದರಿಂದ ಕೋವಿಡ್-19 ನ್ನು ಪರಿಣಾಮಕಾರಿಯಾಗಿ ಎದುರಿಸಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ತಿಳಿಸಿದರು.
ಅವರು ಬುಧವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೋವಿಡ್-19 ಪರೀಕ್ಷೆ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಮುಖ್ಯಸ್ಥ ಡಾ.ಮಂಜುನಾಥ ಬೆನ್ನೂರ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಸಂದರ್ಭದಲ್ಲಿ ಕೋವಿಡ್-19 ಪರೀಕ್ಷೆಯ ನೆಗೆಟಿವ್ ವರದಿ ಮತ್ತು ಪಾಲಕರ ಅನುಮತಿ ಪತ್ರವನ್ನು ತೆಗೆದುಕೊಂಡು ಬಂದ ನಂತರ ತರಗತಿಗಳನ್ನು ಆರಂಭಿಸಲಾಗುವುದು.
ಕಾಲೇಜುಗಳ ಆರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಡಾ.ಬೆನ್ನೂರ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳು 120ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೋವಿಡ್-19 ಪರೀಕ್ಷೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಡಾ,ಮನೋಹರ ಶಿರಹಟ್ಟಿ, ಡಾ.ರೇಶ್ಮಾ ಗಜಕೋಶ, ಸುರೇಶ ನಡೋಣಿ ಗೀತಾ ಸಜ್ಜನ. ವಿ.ವೈಪಾಟೀಲ ಇದ್ದರು.
ನಡೆಯದ ತರಗತಿಗಳು: ರಬಕವಿ ಬನಹಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಸರ್ಕಾರಿ ಮಹಾವಿದ್ಯಾಲಯದಲ್ಲಿ ತರಗತಿಗಳು ನಡೆಯಲಿಲ್ಲ ಎಂದು ಪ್ರಭಾರ ಪ್ರಾಚಾರ್ಯ ಶಂಕರ ಹಳಿಂಗಳಿ ತಿಳಿಸಿದರು.

Social Plugin