ತೇರದಾಳ ಶಾಸಕ ಸಿದ್ದು ಸವದಿ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಚುನಾಯಿತಗೊಂಡ ಕಾರಣ ಸಂಸದ ಪಿ.ಸಿ. ಗದ್ದಿಗೌಡರ ಸೇರಿದಂತೆ ಅನೇಕರು ಸನ್ಮಾನಿಸಿದರು.
ನಿರೀಕ್ಷೆಯ ಗೆಲುವು ನನ್ನದಾಗಿದೆ: ರೈತ ಹಾಗು ನೇಕಾರ ಸಂಘಗಳ ಪ್ರಗತಿಗೆ ಶ್ರಮಿಸುವೆ
ರಬಕವಿ-ಬನಹಟ್ಟಿ,ನ8: ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಗೆಲುವು ನಿರೀಕ್ಷೆಯಂತೆ ಆಗಿದೆ. ಇದು ನನ್ನ ಗೆಲುವು ಎನ್ನುವ ಬದಲು ರಬಕವಿ-ಬನಹಟ್ಟಿ ತಾಲೂಕಿನ ಸಮಸ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಗೆಲುವಾಗಿದೆ ಎಂದು ತೇರದಾಳ ಶಾಸಕ, ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಸಿದ್ದು ಸವದಿ ಹೇಳಿದರು.
ಇಂದು ಬಿಜೆಪಿ ಕಾರ್ಯಾಲಯದಲ್ಲಿ ಸಿದ್ದು ಸವದಿ ಸೌಹಾರ್ದ ಸಹಕಾರಿ ನಿ., ಹಾಗು ಸಿದ್ದು ಸವದಿ ಅಭಿಮಾನಿ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸ್ಪರ್ಧೆಯ ಆಸೆ ನನ್ನದಿರಲಿಲ್ಲ. ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನಿರ್ದೇಶಕರು, ಬಿಜೆಪಿ ಪಕ್ಷದ ಹಿರಿಯರು ಹಾಗು ಮುಖಂಡರ ಒತ್ತಡದಿಂದ ಸ್ಪರ್ಧಿಸಬೇಕಾದ ಅನಿವಾರ್ಯತೆಯಾಯಿತು. ಕಾರ್ಯಕರ್ತರ ಪರಿಶ್ರಮದಿಂದ ನಿರಾಯಾಸ ಗೆಲುವಿಗೆ ಕಾರಣವಾಗಿದೆ ಎಂದು ಸವದಿ ಹೇಳಿದರು.
ರೈತರ ಸಹಕಾರಿ ಸಂಘಗಳಿಗೆ ಹಾಗು ನೇಕಾರ ಸಮುದಾಯಕ್ಕೆ ಸುಲಭ ಯೋಜನೆಯಲ್ಲಿ ಹೆಚ್ಚಿನ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಒದಗಿಸುವದರೊಂದಿಗೆ ರೈತ ಹಾಗು ನೇಕಾರರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ, ಅಲ್ಲದೆ ಬ್ಯಾಂಕ್‍ನ್ನು ಮತ್ತಷ್ಟು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವದೇ ನನ್ನ ಗುರಿಯಾಗಿದೆ. ಚುನಾವಣೆಯಲ್ಲಿ ಯಾರೇ ಗೆಲುವು ಸಾಧಿಸಲಿ, ಪಕ್ಷಾತೀತವಾಗಿ ಬ್ಯಾಂಕ್‍ನ ವ್ಯವಸ್ಥೆಯಡಿಯಲ್ಲಿ ಸೇವೆ ನಡೆಸುವೆ ಎಂದರು.
ಗೆಲುವಿಗೆ ಶ್ರಮಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಡೆಲಿಗೇಟ್ಸ್(ಪ್ರತಿನಿಧಿ)ಗಳಿಗೆ ಕೃತಜ್ಞತೆ ತಿಳಿಸುವೆ ಎಂದರು.
ಇದೇ ಸಂದರ್ಭ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಸೌಮ್ಯ ಹಾಗು ಸಹಾನುಭೂತಿ ಹೊಂದಿರುವ ಶಾಸಕ ಸಿದ್ದು ಸವದಿ ಪರಿಶ್ರಮ ಜೀವಿಯಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಧುಮುಕಿರುವ ಇವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.
ಇದೇ ಸಂದರ್ಭ ಕಾರ್ಯದರ್ಶಿ ಸತೀಶ ಬಂಗಿ, ರಾಹುಲ್ ಡಾಗಾ, ಸಂಗೀತಾ ಮೋಳೆಗಾಂವಿ, ಅಕ್ಷಯ ಜುಂಜಪ್ಪನವರ, ಬಸವರಾಜ ಹಣಗಂಡಿ, ವಿಜಯ ಹಣಗಂಡಿ, ಶ್ರೀಶೈಲ ಬಸವಣ್ಣನವರ, ಬಸವರಾಜ ಕುಂದರಗಿ ಸೇರಿದಂತೆ ಅನೇಕರಿದ್ದರು.

Social Plugin