ಅವಸಾನದ ಅಂಚಿನಲ್ಲಿರುವ ನಿಗಮಕ್ಕೆ ಬೇಕಿದೆ ಪುನಶ್ಚೇತನ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ7: ನೇಕಾರ ಸ್ವಾವಲಂಬಿ ಬದುಕಿಗೆ ನಾಂದಿ ಹಾಡಿದ ಮಾಜಿ ಶಾಸಕ ದಿ.ಪಿ.ಎಂ. ಬಾಂಗಿಯವರು 1972 ರಲ್ಲಿ `ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಎಂದು ಸ್ಥಾಪನೆಗೊಳಿಸಿ ನೇಕಾರರಿಗೆ ಸಂಜೀವಿನಿಯಾಗುವಲ್ಲಿ ಕಾರಣರಾಗಿದ್ದರು. ರಾಜ್ಯ ಹಾಗು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರಮಟ್ಟದಲ್ಲಿಯೇ ಪ್ರಪ್ರಥಮವಾಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಕರ್ನಾಟಕ ತೀವ್ರ ಕೈಮಗ್ಗ ಅಭಿವೃದ್ಧಿ(ಕೆಎಚ್‍ಡಿಸಿ)ನಿಗಮದ ಯೋಜನಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಕಾರಣರಾದರು. ಈ ನಿಗಮದ ಆಶ್ರಯದಲ್ಲಿ ಅಂದು 38 ರಿಂದ 45 ಸಾವಿರ ಮಗ್ಗಗಳು ಪ್ರಗತಿಯಲ್ಲಿದ್ದು ರಾಜ್ಯದಲ್ಲಿ ಲಕ್ಷಾಂತರ ನೇಕಾರರಿಗೆ ಆಶ್ರಯ ತಾಣವಾಗಿತ್ತು. ದಿನದಿಂದ ದಿನಕ್ಕೆ ಉದ್ಯೋಗ ಕ್ಷೀಣಿಸುತ್ತಾ ಬಂದು ಈಗ ಬಾಂಗಿಯವರು ಕಟ್ಟಿ ಬೆಳೆಸಿದ ನಿಗಮವು ಅವಸಾನದ ಅಂಚಿನಲ್ಲಿರುವದು ದುರದೃಷ್ಟಕರ ಸಂಗತಿಯಾಗಿದೆ.
ಇದೀಗ ನೂತನ ಅಧ್ಯಕ್ಷರಾಗಿ ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಈ ನಿಗಮ ಹೆಗಲೇರುವದು ನೇಕಾರರಿಗೆ ಒಂದೆಡೆ ಹರ್ಷ ತಂದಿದ್ದರೆ, ಮತ್ತೊಂದೆಡೆ ಸವದಿಯವರಿಗೆ ಸವಾಲುಗಳ ಜಟಿಲ ಮೆಟ್ಟಿಗಳನ್ನು ಏರುವದು ಪ್ರತಿ ಹೆಜ್ಜೆ ಮೈಲುಗಲ್ಲು ಸ್ಥಾಪಿಸುವಲ್ಲಿ ಕಾರಣವಾಗಲಿದೆ.
ಕೆಎಚ್‍ಡಿಸಿ ನಿಗಮ ಸದೃಢಕ್ಕೆ ಕೈಗೊಂಡ ಕ್ರಮಗಳೇನು?
ರಾಜ್ಯದಲ್ಲಿ ವಿಶೇಷತೆ ಪಡೆದಿರುವ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೇಕಾರರ ಸಂಖ್ಯೆ ಕ್ಷೀಣಿಸಿದೆ. ಕಾವೇರಿ ಹ್ಯಾಂಡ್‍ಲೂಮ್ ಹಾಗು ಪಾವರ್‍ಲೂಮ್ ಮಗ್ಗಗಳ ನಿಗಮ ಸೇರಿ ಜವಳಿ ಕ್ಷೇತ್ರದಲ್ಲಿ ಮೂರನ್ನೂ ಸೇರಿಸಿ ಒಂದೇ ನಿಗಮ ಮಾಡಿದ್ದಲ್ಲಿ ಸರ್ಕಾರದಿಂದ ಪಡೆಯುವ ಯೋಜನೆಗಳು ಸದುಪಯೋಗಕ್ಕೆ ಕಾರಣವಾಗಿ ನೇಕಾರರಿಗೆ ಉತ್ತಮ ಭವಿಷ್ಯ ನಿರ್ಮಾಣವಾಗಲಿದೆ.
ಸಚಿವ ಸ್ಥಾನ ಬದಲು ನಿಗಮ ಸ್ಥಾನ ಒಪ್ಪಿದ್ದೇಕೆ?
ಎಲ್ಲ ಶಾಸಕರೂ ಸಚಿವ ಸ್ಥಾನ ಆಕಾಂಕ್ಷಿಯಾಗಿರುತ್ತಾರೆ. ಅದರಂತೆ ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಹೊಸ ಶಾಸಕರಿಗೆ ಅವಕಾಶ ಕಲ್ಪಿಸಿದ ಪಕ್ಷದ ಆದೇಶಕ್ಕೆ ತಲೆಬಾಗಿ ಸುಮ್ಮನಿದ್ದೆ. ನೇಕಾರರಿಗೆ ಸಂಬಂಧಿಸಿದ ನಿಗಮ ಸ್ಥಾನವನ್ನು ನೇಕಾರ ಸಮುದಾಯದ ಅನುಭವಿ ಓರ್ವರಿಗೆ ನೀಡೆಂದಿದ್ದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದಂತೆ ಯಾವದೇ ಕಾರಣಕ್ಕೂ ನಿಗಮ ಅಧ್ಯಕ್ಷ ಸ್ಥಾನ ಬೇಡವೆನಬಾರದೆಂದಿದ್ದರು. ಅದಕ್ಕೂ ಹೆಚ್ಚು ರಾಜ್ಯದಲ್ಲಿಯೇ ಅತಿ ಹೆಚ್ಚು ನೇಕಾರಿಕೆ ಹೊಂದಿರುವ ಬಾಗಲಕೋಟೆ ಜಿಲ್ಲೆಯ ನೇಕಾರರ ಒತ್ತಾಯದ ಮೆರೆಗೆ ಸ್ಥಾನ ಸ್ವೀಕರಿಸಬೇಕಾದ ಅನಿವಾರ್ಯತೆಯಾಯಿತು.
ಸಂಕಷ್ಟದಲ್ಲಿರುವ ನಿಗಮ ಲಾಭದತ್ತ ಹೇಗೆ ಕೊಂಡುಯ್ಯುವಿರಿ?
ಯಾವದೇ ನಿಗಮವಿರಲಿ ಲಾಭದಲ್ಲಿರುವದನ್ನು ಲಾಭ ತೋರಿಸುವದು ಸಹಜ. ಕಳೆದ ಎರಡು ದಶಕಗಳಿಂದ ಸಂಪೂರ್ಣ ನೆಲಕಚ್ಚಿರುವ ಕೆಎಚ್‍ಡಿಸಿ ನಿಗಮದ ಲಾಭ ಒಂದು ಸವಾಲಾಗಿದೆ. ಸದ್ಯ 108 ಕೋಟಿ ರೂ.ಗಳಷ್ಟು ಸಾಲದ ಸುಳಿಯಲ್ಲಿ ನಿಗಮ ಸಿಲುಕಿದೆ. ಬೆಂಗಳೂರಿನ ಪೀಣ್ಯ ಲೇಔಟ್‍ನಲ್ಲಿರುವ 3 ಎಕರೆ ಹಾಗು ಹುಬ್ಬಳ್ಳಿಯಲ್ಲಿ ಖಾಲಿ ಬಿದ್ದಿರುವ ಭೂಮಿ ಸರ್ಕಾರದ ಮೂಲಕ ಅಧಿಕೃತ ಮಾರಾಟ ಮಾಡುವ ಮೂಲಕ ಮೊದಲು ಸಾಲಕ್ಕೆ ವಾರ್ಷಿಕ ಸುಮಾರು 10 ಕೋಟಿ ರೂ.ಗಳಷ್ಟು ಬಡ್ಡಿ ತುಂಬುವದನ್ನು ನಿಲ್ಲಿಸಬೇಕಿದೆ. ನಂತರ ಹಂತ-ಹಂತವಾಗಿ ಅಭಿವೃದ್ಧಿ ಮೂಲಕ ಲಾಭ ಹೊಂದುವದು.
ನೇಕಾರರ ಅಭಿವೃದ್ಧಿಗೆ ಸರ್ಕಾರದಿಂದ ಅವಶ್ಯವಾಗಿರುವದೇನು?
-ಮಹತ್ವದ್ದಾಗಿ ಪಾವರ್‍ಲೂಮ್, ಹ್ಯಾಂಡಲೂಮ್ ನೇಕಾರರಿಗೆ ಆರ್ಥಿಕ ಸಬಲೀಕರಣಕ್ಕೆ ಸುಮಾರು 200 ಕೋಟಿ ರೂ.ಗಳಷ್ಟು ಆವರ್ತ ನಿಧಿಯೆಂದು ಸರ್ಕಾರ ಬಿಡುಗಡೆಗೊಳಿಸಿದ್ದಲ್ಲಿ ಪ್ರತಿ ವರ್ಷ ಕೆಲ ತಿಂಗಳಲ್ಲಿ ಸೀರೆಗಳು ಮಾರಾಟವಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೇಕಾರರಿಗೆ ದೊರಕುವದು. ಮುಖ್ಯಮಂತ್ರಿ ಹಾಗು ಜವಳಿ ಸಚಿವರನ್ನು ತೀವ್ರ ಒತ್ತಾಯಿಸಿ ಜಾರಿಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ.
* ವಿದ್ಯಾವಿಕಾಸ ಯೋಜನೆ ನಿರಂತರ ಜಾರಿಗೆ ಕ್ರಮಯೇನು?
- ರಾಜ್ಯ ಸರ್ಕಾರದಿಂದ ಶಾಲಾ ವಿದ್ಯಾರ್ಥಿಗಳಿಗೆ ಬಟ್ಟೆ ಖರೀದಿಸುವಲ್ಲಿ ಕೆಎಚ್‍ಡಿಸಿ ನಿಗಮದಿಂದಲೇ ವಿದ್ಯಾವಿಕಾಶ ಯೋಜನೆಯಡಿ ಬಟ್ಟೆ ಖರೀದಿಗೆ ನಿಯಮವಿದೆ. ಇದನ್ನು ಗಟ್ಟಿಗೊಳಿಸುವ ಮೂಲಕ ನೇಕಾರರಿಗೆ ಮತ್ತಷ್ಟು ಉದ್ಯೋಗ ದೊರಕಿಸುವಲ್ಲಿ ಪ್ರಯತ್ನಿಸುವೆ. ಅಲ್ಲದೆ ಸರ್ಕಾರದಿಂದ ಬಾಕಿಯನ್ನು ಶೀಘ್ರವೇ ನಿಗಮಕ್ಕೆ ವರ್ಗಾಯಿಸಲು ಪ್ರಯತ್ನಿಸುವೆ.
* ನೇಕಾರರಿಗೆ ನಿರಂತರ ಉದ್ಯೋಗದೊಂದಿಗೆ ಉದ್ಯೋಗ ಭದ್ರತೆಗೆಯಾಗುವದೆ?
-ಕೈಮಗ್ಗ ನೇಕಾರರಿಗೆ ಕಳೆದೆರಡು ವರ್ಷಗಳ ನನ್ನ ಆಡಳಿತದಲ್ಲಿ ಯಾವ ದಿನವೂ ಉದ್ಯೋಗ ನಿಂತಿಲ್ಲ. ನಿಯಮ ಬದ್ಧವಾಗಿ ಕಚ್ಚಾ ವಸ್ತುಗಳ ಪೂರೈಕೆಯೊಂದಿಗೆ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿಯೂ ನೇಯ್ಗೆಗೆ ಹೆಚ್ಚಿನ ಅವಕಾಶ ಮಾಡುವ ಮೂಲಕ ಕುಟುಂಬ ನಿರ್ವಹಣೆಗೆ ಯಾವದೇ ಸಮಸ್ಯೆ ಎದುರಾಗಿಲ್ಲ. ಮುಂದೆಯೂ ಉದ್ಯೋಗ ಭದ್ರತೆಯೊಂದಿಗೆ ನಿರಂತರ ಉದ್ಯೋಗ ದೊರಕಲಿದೆ.
* ನೇಕಾರರಿಗೆ ಹೊಸ ಯೋಜನೆ ರೂಪಿಸಲು ಯತ್ನಿಸುವಿರಾ?
- ಕೊರೊನಾ ಸಂದರ್ಭದಲ್ಲಿ ಕೈಮಗ್ಗ ಹಾಗು ವಿದ್ಯುತ್ ಮಗ್ಗಗಳ ನೇಕಾರರಿಗೆ ಮಹತ್ತರ ಯೋಜನೆಯನ್ನಾಗಿ `ನೇಕಾರ ಸಮ್ಮಾನ ಯೋಜನೆ ನಾಮದಡಿ ಪ್ರತಿ ನೇಕಾರನಿಗೆ 5 ಸಾವಿರ ರೂ.ಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದೆ, 2 ಸಾವಿರ ರೂ.ಗಳನ್ನು ಬಿಡುಗಡೆಗೊಳಿಸುವ ಮೂಲಕ ನೇಕಾರ ಕುಟುಂಬಗಳಿಗೆ ಆಸರೆಯಾಗಿದೆ. ಪ್ರತಿ ವರ್ಷ ಕೈಮಗ್ಗ ನೇಕಾರ ಕುಟುಂಬಗಳಿಗೆ ಈ ಯೋಜನೆಯಡಿ ಆಯಾ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವ ಯೋಜನೆ ಮಹತ್ವ ಪಡೆದಿದೆ. ಕೈಮಗ್ಗ ನೇಕಾರರ ಮಜೂರಿ ಹೆಚ್ಚಳದೊಂದಿಗೆ ಗೌರವ ಧನವನ್ನೂ ಹೆಚ್ಚಳದ ಕುರಿತು ಸರ್ಕಾರಕ್ಕೆ ಪ್ರಸ್ತಾವಣೆ ಕಳಿಸಲಾಗಿದೆ. ಅದೂ ಕೂಡ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ವಿದ್ಯುತ್ ಮಗ್ಗ ಹಾಗು 40 ಸಾವಿರ ಕೈಮಗ್ಗ ನೇಕಾರರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 6500 ಜವಳಿ ಘಟಕಗಳಿದ್ದು, ಸಣ್ಣ, ಅತಿಸಣ್ಣ ಮಧ್ಯಮ, ಬೃಹತ್ ಜವಳಿ ಕೈಗಾರಿಕೆಗಳಿವೆ.
ರಾಷ್ಟ್ರೀಯ ಕೈಮಗ್ಗ ಯೋಜನೆ ಹಾಗು ಭೀಮಾ ವಿಮಾ ಯೋಜನೆಯಡಿ ನೇಕಾರರಿಗೆ ಸೌಲಭ್ಯಗಳು ಈಗಾಗಲೇ ದೊರಕುತ್ತಿವೆ. ಅಂತ್ಯ ಸಂಸ್ಕಾರಕ್ಕೆಂದು 5 ಸಾವಿರ ರೂ. ಗಳನ್ನೂ ಸರ್ಕಾರ ವ್ಯವಸ್ಥೆ ಕಲ್ಪಿಸಿದೆ.
ನೇಕಾರರಿಗೆ ಸಾಲ ಸೌಲಭ್ಯದಲ್ಲಿ ಶೇ.1 ರಷ್ಟು ಗರಿಷ್ಠ 2 ಲಕ್ಷ ರೂ.ದವರೆಗೆ ಹಾಗು ಶೇ.3 ರ ಬಡ್ಡಿ ಆಕರಣೆಯಲ್ಲಿ 5 ಲಕ್ಷ ರೂ.ಗಳವರೆಗೆ ಯೋಜನೆ ರೂಪಿಸಿದೆ ಎಂದರು. ಇವಲ್ಲದೆ ವಿನೂತನ ವಿನ್ಯಾಸ ಹಾಗು ಮೇಲ್ದರ್ಜೆಗೆ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿಗಮದ ಪುನಶ್ಚೇತನ ಜೊತೆಗೆ ಸಂಕಷ್ಟದಲ್ಲಿರುವ ನೇಕಾರ ಕುಟುಂಬಗಳಿಗೆ ನೆರವಾಗುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ಸಿದ್ದು ಸವದಿ ತಿಳಿಸಿದರು.

Social Plugin