ಚಿಕ್ಕ ಹಿಡುವಳಿಯಲ್ಲಿ `ಏಲಕ್ಕಿ ಬಾಳೆ’ ಬೆಳೆದಿರುವ ಯುವ ರೈತ ಸುಭಾಷ ಮದುರಖಂಡಿ
ಕಬ್ಬಿನ ಬೆಳೆಯಲ್ಲಿ ಮಿಶ್ರಬೆಳೆಯೊಂದಿಗೆ ಲಾಭ ತೋರಿಸುವಲ್ಲಿ ಯಶಸ್ಸು ಕಂಡಿರುವ ಸುಭಾಷ.
ಚಿಕ್ಕ ಹಿಡುವಳಿದಾರರಿಗೂ `ಲಕ್ಕಿ’ಯಾದ `ಏಲಕ್ಕಿ’ ಬಾಳೆ
*ಕಬ್ಬಿನ ಬೆಳೆಯಲ್ಲಿ ದ್ವಿದಳ ಧಾನ್ಯಗಳ ಮಿಶ್ರ ಬೆಳೆ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ನ6: ವಾಣಿಜ್ಯ ಬೆಳೆಯಾದ `ಕಬ್ಬು’ ಬೆಳೆ ತಾಲೂಕಿನ ಸಿಂಹಪಾಲು ಹೊಂದಿದ ಪ್ರದೇಶ. ಬಹುತೇಕ ಭೂಮಿಗಳು ಕಬ್ಬು ಬೆಳೆಯಿಂದಲೇ ತುಂಬಿದವಾಗಿವೆ. ಒಂದೇ ಬೆಳೆಗೆ ಒತ್ತು ನೀಡದೆ ಹೊಸ ಪ್ರಯೋಗದೊಂದಿಗೆ ಮುಂದಾದ ಯುವ ರೈತನೋರ್ವ ಚಿಕ್ಕ ಹಿಡುವಳಿಯಲ್ಲಿಯೂ ಏಲಕ್ಕಿ ಬಾಳೆ ಬೆಳೆಬಹುದೆಂದು ಕಳೆದ ಮೂರ್ನಾಲ್ಕು ವರ್ಷಗಳಿಂದ ತೋರಿಸಿಕೊಡುವ ಮೂಲಕ ಮತ್ತೇ ಈ ಬಾರಿ ಭರ್ಜರಿ ಆದಾಯದ ನಿರೀಕ್ಷೆಯಲ್ಲಿದ್ದಾನೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಯುವ ಕೃಷಿಕ ಸುಭಾಷ ಮದರಖಂಡಿಯವರು ನಾವಲಗಿಯಲ್ಲಿರುವ ಸುಮಾರು ಅರ್ಧ ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿಯಡಿ ಏಲಕ್ಕಿ ಬಾಳೆ ಬೆಳದು ವಿಶಿಷ್ಠ ಸಾಧನೆ ಮಾಡುವಲ್ಲಿ ಕಾರಣರಾಗಿದ್ದಾರೆ.
ಈ ಮೊದಲು ಜವಾರಿ ಹಾಗು ಜಿ-9 ತಳಿಯ ಬಾಳೆ ಬೆಳೆಯುವದು ರೂಢಿಯಲ್ಲಿದೆ. ಈ ಬಾರಿ ಬೆಂಗಳೂರಿನ ಲಾಲ್‍ಬಾಗ್ ನಡೆದ ಕೃಷಿ ಮೇಳಕ್ಕೆ ತೆರಳಿದ ಸಂದರ್ಭ ಅಲ್ಲಿನ ತರುಗಳನ್ನು ತಂದು ಅದರ ವೈಶಿಷ್ಟ್ಯತೆಗಳ ಮಾಹಿತಿ ಪಡೆದು ನಾಟಿ ಮಾಡಿದ್ದೇನೆ ಎನ್ನುತ್ತಾರೆ ಸುಭಾಷ.
400 ತರು: ಏಲಕ್ಕಿ ಬಾಳೆಯ ಸುಮಾರು 400 ತರುಗಳನ್ನು ತಂದು ನಾಟಿ ಮಾಡಿದ್ದಾರೆ. 35 ರೂ.ಗೆ ಒಂದರಂತೆ ತಂದಿರುವ ಈ ತರು ಸದ್ಯ ಬಾಳೆ ಕಟಾವಿಗೆ ಬಂದಿದೆ. ಪ್ರತ್ಯೇಕವಾಗಿ ಸುಮಾರು ಏಳೆಂಟು ಅಡಿ ಅಂತರದಲ್ಲಿ ಬೆಳೆದ ಬಾಳೆಗೆ ಹನಿ ನೀರಾವರಿ ಮೂಲಕ ನೀರು ಬಿಡುವ ವ್ಯವಸ್ಥೆ ಮಾಡಿಕೊಂಡಿದ್ದಲ್ಲದೆ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅನುಸರಿಸಿದ್ದಾರೆ. ಸದ್ಯ ಬಾಳೆ ಗೊನೆಗಳನ್ನು ಬಿಡುತ್ತಿರುವ ಗಿಡಗಳು 8 ರಿಂದ 10 ಅಡಿಯಷ್ಟು ಎತ್ತರ ಬೆಳೆದಿವೆ. ಎರಡುವರೆ ವರ್ಷಗಳಲ್ಲಿ ಮೂರು ಬೆಳೆ ಬರುವಲ್ಲಿ ಕಾರಣವಾಗಲಿದೆ ಎನ್ನುತ್ತಾರೆ ರೈತ ಸುಭಾಷ ಮದುರಖಂಡಿ.
2 ಲಕ್ಷ ಆದಾಯ ನಿರೀಕ್ಷೆ: ಸುಭಾಷ ಬೆಳೆದ ಅರ್ಧ ಎಕರೆ ಪ್ರದೇಶದ ಬಾಳೆಯು 15 ರಿಂದ 20 ಕೆಜಿಯಷ್ಟು ತೂಕದಷ್ಟಿದೆ. ಸದ್ಯ ಮಾರುಕಟ್ಟೆಯ ಬೆಲೆ ಪ್ರತಿ ಕೆಜಿಗೆ 50 ರೂ.ಗಳವರೆಗೆ ಇದ್ದು, 400 ಗಿಡಗಳಿಂದ ಸುಮಾರು 2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ರೈತನ ಕೈ ಹಿಡಿದ `ಜೀವಾಮೃತ’: ಬಾಳೆ ಬೆಳೆಗೆ ಜೀವಾಮೃತವು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಯುವ ರೈತರಿಗೂ ಅರಿತ ವಿಷಯವಾಗಿದೆ. ಜವಾರಿ ಕೋಳಿಯ ತತ್ತಿ, ಆಕಳ ಮೂತ್ರ, ಸಗಣಿ, ಸಾವಯವ ಬೆಲ್ಲ, ಕಡ್ಲಿಹಿಟ್ಟು, ಹುತ್ತಿನ ಮಣ್ಣು ಅಥವಾ ಉಳಿಮೆ ಮಾಡದ ಮಣ್ಣನ್ನು ಮಿಶ್ರಣಗೊಳಿಸುವ ಮೂಲಕ ತಯಾರಿಸುವ `ಜೀವಾಮೃತ’ವು ಬಾಳೆ ಬೆಳೆಗೆ `ರಾಮಬಾಣ’ವಾಗಿದೆ.
ಕಬ್ಬಿನಲ್ಲಿ ಮಿಶ್ರ ಬೆಳೆ: ಎಲ್ಲ ರೈತರು ಕೇವಲ ಕಬ್ಬನ್ನು ಬೆಳೆಸುವ ಮೂಲಕ ನೇರವಾಗಿ ವಾಣಿಜ್ಯ ಬೆಳೆಯನ್ನೇ ಅವಲಂಬಿತರಾಗಿ ಒಂದೊಂದು ಬಾರಿ ಹಾನಿಯಾಗುವ ಸಂಭವ ಸಹಜ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇತರೆ ಬೆಳೆಗಳಿಗೂ ಮೊರೆಹೋಗಬೇಕಾದ ಅನಿವಾರ್ಯತೆ ರೈತನದ್ದಾಗಿದೆ. ಯುವ ರೈತ ಸುಭಾಷ ತನ್ನ ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲ್ಲಿ ಉದ್ದ(ಉದ್ದಿನ ಬೇಳೆ), ಗೋವಿನ ಜೋಳ ಬೆಳೆಯುವದರ ಮೂಲಕ ಮಿಶ್ರ ಬೆಳೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಪ್ರಯೋಜನ: ಕಬ್ಬು ಬೆಳೆಯ ಅವಧಿ ಒಂದು ವರ್ಷದ್ದಾಗಿದ್ದರೆ, ಉಪಬೆಳೆಗಳಾದ ದ್ವಿದಳ ಧಾನ್ಯಗಳದ್ದು 3 ರಿಂದ 4 ತಿಂಗಳ ಬೆಳೆಯಾಗಿದ್ದು, ಉತ್ತಮ ಆದಾಯವನ್ನು ರೈತನಿಗೆ ಒದಗಿಸುತ್ತದೆ. ಅಲ್ಲದೆ ಪ್ರಮುಖವಾಗಿ ಕಬ್ಬು ಬೆಳೆ 4 ಅಡಿ ಅಂತರದಲ್ಲಿರುವ ಕಾರಣ ಮಧ್ಯ ಭಾಗದಲ್ಲಿ ಈ ಬೆಳೆಯನ್ನು ಸುಲಭವಾಗಿ ಬೆಳೆಯಬಹುದು. ಇವುಗಳ ತಪ್ಪು ಸೇರಿದಂತೆ ಇತರೆ ಗೊಬ್ಬರವು ಕಬ್ಬಿಗೆ ಪ್ರಮುಖ ಪೌಷ್ಠಿಕಾಂಶವಾಗಲು ಕಾರಣವಾಗಿ, ಮತ್ತಷ್ಟು ಬಲಿಷ್ಠವಾಗಿ ಕಬ್ಬು ಬೆಳೆಯಲು ಸಹಕಾರಿಯೂ ಆಗುತ್ತದೆ ಎಂಬುದು ಅನುಭವದೊಂದಿಗೆ ಸುಭಾಷ ಮದರಖಂಡಿ ಹೇಳಿದರು. ಹೆಚ್ಚಿನ ಮಾಹಿತಿಗೆ 98445-88300 ಸಂಪರ್ಕಿಸಬಹುದು.
`ಮೂರ್ನಾಲ್ಕು ವರ್ಷಗಳಿಂದ `ಏಲಕ್ಕಿ ಬಾಳೆ’ ಬೆಲೆಯುತ್ತಿದ್ದೇನೆ. ಲಾಭದ ಬಾಳೆಯಾಗುವಲ್ಲಿ ತೋರಿಸಿಕೊಟ್ಟಿದೆ. ವಾಣಿಜ್ಯ ಬೆಳೆಯಾದ ಕಬ್ಬಿನೊಂದಿಗೆ ಮಿಶ್ರ ಬೆಳೆಯು ರೈತನ ಆರ್ಥಿಕತೆಗೆ ಸಬಲವಾಗುವದು’.----ಸುಭಾಷ ಮದುರಖಂಡಿ, ಯುವ ರೈತ, ರಬಕವಿ-ಬನಹಟ್ಟಿ.

Social Plugin