ಅಗಾಧ ಪ್ರತಿಭೆಯ ವಿಕ್ಷಿಪ್ತ ಲೇಖಕ ಬೆಳೆಗೆರೆ
ರಬಕವಿ-ಬನಹಟ್ಟಿ,ನ13: ಅದ್ಭುತ ಹಾಗು ಸವ್ಯಸಾಚಿ ಬರಗಾರ, ಸಿಂಹ ಘರ್ಜನೆಯ ಪತ್ರಕರ್ತ, ಹೀಗಿದ್ದೂ ಮೃದು ಹೃದಯಿಯಾಗಿದ್ದ ರವಿ ಬೆಳೆಗೆರೆಯವರ ಸಾವು ನೋವು ತರುವಂಥದ್ದು ಎಂದು ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.
ರಬಕವಿ-ಬನಹಟ್ಟಿಯಲ್ಲಿ ಇಂದು ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಯುಕ್ತ ಕರ್ನಾಟಕ ಹಾಗು ಕಸ್ತೂರಿಯಲ್ಲಿ ಸಂಪಾದಕೀಯ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಮೂಲಕ ಓದುಗರ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದರು ಎಂದರು.
ಮತ್ತೋರ್ವ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಮಾತನಾಡಿ, ರವಿ ಬೆಳೆಗೆರೆಯವರು ಬರವಣಿಗೆ ಶೈಲಿಯೇ ವಿಶಿಷ್ಠವಾದುದು. ಹಾಗೆಯೆ ಗತ್ತಿನಿಂದ ಕೂಡಿದ್ದ ಅವರ ಮಾತುಗಾರಿಕೆಯೂ ಕೂಡ. ಪತ್ರಕರ್ತರೊಂದಿಗೆ ಸಾಹಿತ್ಯದ ನಂಟು ಅವರನ್ನು ಮತ್ತಷ್ಟು ಉತ್ತುಂಗಕ್ಕೆ ತಲುಪಿಸುವಲ್ಲಿ ಕಾರಣವಾಗಿತ್ತು. ದಿಟ್ಟ ಬರಹಗಾರರಾಗಿ ರಾಜಕಾರಣಿಗಳ ಹಾಗು ಕ್ರೈಂ ಲೋಕದಲ್ಲಿ ಹೆಸರು ಮಾಡಿದವರಾಗಿದ್ದರು ಎಂದರು. 
ಇದೇ ಸಂದರ್ಭ ಮಕ್ಕಳ ಸಂಗಮ ಅಧ್ಯಕ್ಷ ಜಯವಂತ ಕಾಡದೇವರ, ಸಾಹಿತಿ ಜಿ.ಎಸ್. ವಡಗಾಂವಿ, ಎಂ.ಎಸ್. ಬದಾಮಿ, ಕಾನಿಪ ಅಧ್ಯಕ್ಷ ನೀಲಕಂಠ ದಾತಾರ, ಬಸಯ್ಯ ವಸ್ತ್ರದ, ಕಿರಣ ಆಳಗಿ, ಶಿವಾನಂದ ಮಹಾಬಳಶೆಟ್ಟಿ, ಮಲ್ಲಿಕಾರ್ಜುನ ತುಂಗಳ, ವಿಶ್ವಜ ಕಾಡದೇವರ, ಯಶವಂತ ವಾಘಮೋರೆ, ಚಿದಾನಂದ ಕಾರಜೋಳ, ಈಶ್ವರ ಕರೋಳಿ, ಚಂದ್ರು ತುಂಗಳ, ಎಸ್.ಎಂ. ಮೇಟಿಪಾಟೀಲ, ಪ್ರಕಾಶ ಕುಂಬಾರ ಸೇರಿದಂತೆ ಅನೇಕರಿದ್ದರು.