ಸವದಿ ವಿರುದ್ಧ ಪ್ರಕರಣ: ತಿರಸ್ಕರಿಸಿದ ಹೈಕೋರ್ಟ್
ರಬಕವಿ-ಬನಹಟ್ಟಿ,ನ4: ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಕಾವು ಕೊನೆಯ ದಿನದವರೆಗೂ ಬಿರುಸಿನಿಂದ ಕೂಡಿತ್ತು. ಬಾಗಲಕೋಟೆ ಡಿಸಿಸಿ ಬ್ಯಾಂಕ್‍ನ ರಬಕವಿ-ಬನಹಟ್ಟಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ನಿರ್ದೇಶಕ ಮಂಡಳಿಗೆ ನಾಮಪತ್ರ ಸಲ್ಲಿಸಿದ್ದ ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ದ್ವಿಸದಸ್ಯತ್ವ ಕಾರಣ ಸದಸ್ಯತ್ವ ರದ್ದುಪಡಿಸುವಂತೆ ಕೋರಿ ಬಿಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ, ಇದೇ ಕ್ಷೇತ್ರದಿಂದ ಸ್ಪರ್ಧಿಯಾಗಿರುವ ಭೀಮಪ್ಪ ಶಿದಗೌಡ ಮಗದುಮ್ ಹೈಕೋರ್ಟ್ ಮೊರೆ ಹೋಗಿದ್ದರು.
ಬ್ಯಾಂಕ್‍ನ ಚುನಾವಣೆ ಪ್ರಕ್ರಿಯೆ ಪ್ರಾರಂಭವಿರುವ ಕಾರಣ ನ್ಯಾಯಾಲಯ ಮಧ್ಯಪ್ರವೇಶವಾಗಲು ನಿರಾಕರಣೆ ಮಾಡುವ ಮೂಲಕ ಸಕ್ಷಮ ಪ್ರಾಧಿಕಾರಕ್ಕೆ ಕೋರುವಂತೆ ಹೈಕೋರ್ಟ್ ಸೂಚಿಸದಲ್ಲದೆ ಪ್ರಕರಣವನ್ನು ನಿರಾಕರಿಸಿದೆ.
ಏನಿದು ಪ್ರಕರಣ: ಬಿಡಿಸಿಸಿ ಬ್ಯಾಂಕ್ ಚುನಾವಣೆಯ ರಬಕವಿ-ಬನಹಟ್ಟಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ತೇರದಾಳ ಶಾಸಕ ಸಿದ್ದು ಸವದಿಯವರು ಈ ಮುಂಚೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದ ಪಿಕೆಪಿಎಸ್‍ನಲ್ಲಿ ಸಾಲಗಾರ ಶೇರುದಾರ ಹೊಂದಿದ್ದು, ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಿನ ಪಿಕೆಪಿಎಸ್ ಸಂಘದಲ್ಲಿಯೂ ಸದಸ್ಯತ್ವವನ್ನು ಹೊಂದಿರುವ ಕಾರಣ ಬಿಡಿಸಿಸಿ ಬ್ಯಾಂಕ್ ಚುನಾವಣಾ ಮತದಾರರ ಯಾದಿ ಪರ ಹೊಸೂರಿನ ಪಿಕೆಪಿಎಸ್ ಸಂಘವನ್ನು ರದ್ದುಪಡಿಸುವಂತೆ ಬಿ.ಎಸ್. ಮಗದುಮ್ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಒಳಮರ್ಮ: ಜಮಖಂಡಿ ತಾಲೂಕಿನ ಹಿರೇಪಡಸಲಗಿಯ ಪಿಕೆಪಿಎಸ್ ಸಂಘದಲ್ಲಿ 10/02/2019 ರಂದು ಅಧಿಕೃತವಾಗಿ ತೇರದಾಳ ಶಾಸಕ ಸಿದ್ದು ಸವದಿ ರಾಜೀನಾಮೆ ನೀಡಿದ್ದಾರೆ. ಅದರಂತೆ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರು ಪಿಕೆಪಿಎಸ್ ಸಂಘದಲ್ಲಿ 02/05/2019 ರಂದು ಸದಸ್ಯತ್ವ ಹೊಂದಿದ್ದಲ್ಲದೆ 12/07/2020 ರಂದು ನಿರ್ದೇಶಕರಾಗಿಯೂ ಕಾರ್ಯ ಸಲ್ಲಿಸಿರುವದು ದಾಖಲೆ ಮೂಲಕ ತಿಳಿದು ಬರುವ ಅಂಶವಾಗಿದೆ.
`ಕಾನೂನಿನ ಚೌಕಟ್ಟಿನಡಿಯಲ್ಲಿಯೇ ಚುನಾವಣೆಗೆ ಸ್ಪರ್ಧಿಸಿದ್ಧೇನೆ. ಅಲ್ಲದೆ ರಬಕವಿ-ಬನಹಟ್ಟಿ ತಾಲೂಕಿನ ಆಕಾಂಕ್ಷಿಗಳ ಒತ್ತಡದಿಂದ ಕಣಕ್ಕಿಳಿದಿರುವೆ, ವಿನಾಕಾರಣ ತೇಜೋವಧೆ ಸಲ್ಲದು.’----ಸಿದ್ದು ಸವದಿ, ಶಾಸಕರು, ತೇರದಾಳ.
`ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ. ಸಕ್ಷಮ ಪ್ರಾಧಿಕಾರಕ್ಕೆ ಪ್ರಕರಣ ತೆರವುಗೊಳಿಸಿದ್ದನ್ನು ಸ್ವಾಗತಿಸಲೇಬೇಕು.’----ಭೀಮಶಿ ಮಗದುಮ್, ಅಧ್ಯಕ್ಷರು, ಪಿಕೆಪಿಎಸ್ ಸಂಘ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬನಹಟ್ಟಿ.

Social Plugin