ದಿ.19ರಂದು ಬನಹಟ್ಟಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್
ರಬಕವಿ-ಬನಹಟ್ಟಿ,ನ5: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವು ನ.19 ರಂದು ಬನಹಟ್ಟಿಯ ಹಿರಿಯ ಹಾಗು ಕಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ನಡೆಯಲಿದ್ದು, ರಾಜೀಯಾಗಬಲ್ಲ ಪ್ರಕರಣಗಳನ್ನು ಸಾರ್ವಜನಿಕರು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕೆಂದು ಕಾನೂನು ಸೇವಾ ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗು ಹಿರಿಯ ಶ್ರೇಣಿ ನ್ಯಾಯಾಲಯ ನ್ಯಾಯಾಧೀಶೆ ರೇಷ್ಮಾ ಕ. ಗೋಣಿ ಮತ್ತು ಪ್ರಾಧಿಕಾರದ ಕಾರ್ಯದರ್ಶಿ, ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಮಹೇಶ ಚಂದ್ರಕಾಂತ ತಿಳಿಸಿದರು.
ನಗರದ ನ್ಯಾಯಾಲಯಗಳ ಆವರಣದಲ್ಲಿರುವ ಕಾನೂನು ಸೇವಾ ಪ್ರಾಧಿಕಾರ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ರಾಷ್ಟ್ರೀಯ ಲೋಕ ಅದಾಲತ್ ಕುರಿತು ಮಾಹಿತಿ ನೀಡಿದರು.
ಕಕ್ಷಿದಾರರಿಗೆ ತ್ವರಿತ ನ್ಯಾಯದಾನ, ವಾದಿ ಮತ್ತು ಪ್ರತಿ ವಾದಿಗಳ ಹಣ, ಸಮಯ ಉಳಿಯುತ್ತದೆ. ಸಂಬಂಧಗಳು ಗಟ್ಟಿಯಗುತ್ತವೆ ಎಂದು ತಿಳಿಸಿದರು.
ಕಳೆದ ಸೆಪ್ಟೆಂಬರ್ 19 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿರುವ 112 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಕುರಿತಂತೆ ರಾಜೀ ಸಂಧಾನ ಮಾಡುವ ಪ್ರಕರಣವನ್ನು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ವಕೀಲರ ಸಭೆ ನಡೆಸಿ ತಿಳಿಸಲಾಗಿದೆ ಎಂದು ಮಹೇಶ ಚಂದ್ರಕಾಂತ ತಿಳಿಸಿದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳಾದ ತಮ್ಮ ಚಾಲ್ತಿ ಸಿವಿಲ್, ಬ್ಯಾಂಕ್, ಮೋಟಾರು ವಾಹನ ಕಾಯ್ದೆ, ಭೂಸ್ವಾಧೀನ, ವೈವಾಹಿಕ ವ್ಯಾಜ್ಯಗಳು, ಚೆಕ್ ಅಮಾನ್ಯ, ಕಂದಾಯ ಹಾಗು ರಾಜೀ ಆಗಬಲ್ಲ ಕ್ರಿಮಿನಲ್ ಪ್ರಕರಣಗಳನ್ನು ಹಾಗು ಪೂರ್ವ ವ್ಯಾಜ್ಯ ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಇತ್ಯರ್ಥವಾದ ವ್ಯಾಜ್ಯಗಳ ಕುರಿತು ಪಕ್ಷಗಾರರ ಮೇಲ್ಮನವಿ ಸಲ್ಲಿಸಬಹುದು. ಆದರೆ, ಜನತಾ ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶವಿರುವದಿಲ್ಲವೆಂದು ತಿಳಿಸಿದರು.

Social Plugin