ರಬಕವಿ-ಬನಹಟ್ಟಿ ತಾಲೂಕಿನ ರಾಂಪುರ ನಗರದಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ಅಳಿದುಳಿದ ಸಂಪರ್ಕಗಳ ಒಳಭಾಗದಲ್ಲಿ ಕೇವಲ ಒಬ್ಬನೇ ಒಬ್ಬ ಸಿಬ್ಬಂದಿ ಸೇವೆ ಮಾಡುತ್ತಿರುವ ಚಿತ್ರ.
ಪ್ರಭಾರವೇ ಎಲ್ಲ, ಸಿಬ್ಬಂದಿಗಳೇ ಇಲ್ಲ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ನ26: ಖಾಯಂ ಸಿಬ್ಬಂದಿ ನೇಮಕ ಇಲ್ಲದ ಪ್ರಯುಕ್ತ ತಾಲೂಕಿನ ರಾಮಪೂರದಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಸಿಬ್ಬಂದಿ ಕೊರತೆಯಿಂದ ದೂರ ಸಂಪರ್ಕದಾರರು ಪರದಾಡುವಂತಾಗಿದೆ.
ಕಳೆದ ಒಂದು ವಾರದಿಂದ ಅವಳಿ ನಗರದಲ್ಲಿ ನೆಟ್‍ವರ್ಕ್ ಇಲ್ಲ ಹಾಗೂ ನೆಟ್ ಕೂಡಾ ಇಲ್ಲದೆ ಬಿಎಸ್‍ಎನ್‍ಎಲ್ ಗ್ರಾಹಕರು ಪರದಾಡುತ್ತಿದ್ದಾರೆ. ಸಮಸ್ಯೆ ಹೇಳಲು ನಗರಸಭೆ ವ್ಯಾಪ್ತಿಯಲ್ಲಿರುವ ರಾಂಪುರ ನಗರದ ಸ್ವಂತ ಕಚೇರಿಗೆ ಹೋದರೆ ಅಲ್ಲಿ ಯಾರೂ ಇರುವುದಿಲ್ಲ. ಸಮಸ್ಯೆಗಳಿಗಾಗಿಯೇ ಇದ್ದ ದೂರವಾಣಿಗೆ ಕರೆ ಮಾಡಿದರೆ ಯಾರೋಬ್ಬರೂ ಸ್ವೀಕರಿಸುವುದಿಲ್ಲ. ಇದರಿಂದ ಗ್ರಾಹಕರು ತುಂಬಾ ಬೇಸತ್ತು ಹೋಗಿದ್ದಾರೆ. ಹೀಗಾದರೆ ಅನೇಕ ಗ್ರಾಹಕರು ಇದರ ಸಂಪರ್ಕ ಕೈಬಿಡುತ್ತಿದ್ದಾರೆ.
ಸ್ವಂತ ಕಟ್ಟಡ ಈಗ ಭೂತ್ ಬಂಗಲೆ ಯಾಗಿದೆ. ರಾಂಪುರ ಕಚೇರಿಯಲ್ಲಿ ಯಾವುದೇ ಭದ್ರತೆಯಿಲ್ಲ. ಗೌಪ್ಯತೆಯಂತೂ ಇಲ್ಲವೇ ಇಲ್ಲ, ಯಾರು ಬೇಕಾದರೂ ಕಚೇರಿ ಒಳಗಿನ ರಹಸ್ಯ ಪ್ರದೇಶದವರೆಗೂ ಹೋಗಿ ಬರಬಹುದು. ಇಲ್ಲಿ ಸುರಕ್ಷತೆ ದೃಷ್ಟಿಯಿಂದ ಯಾವುದೇ ವ್ಯವಸ್ಥೆ ಇಲ್ಲ. ಸಿಸಿ ಟಿವಿಯಂತೂ ಗಗನ ಕುಸುಮ. ಈಗ ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ಯಾವುದೇ ಸುರಕ್ಷಿತೆ ಇಲ್ಲದಂತಾಗಿದೆ
ಕಳೆದ ಐದು ವರ್ಷಗಳ ಹಿಂದೆ ರಬಕವಿ-ಬನಹಟ್ಟಿಯಲ್ಲಿ ಒಟ್ಟು 5798ಕ್ಕೂ ಅಧಿಕ ಸ್ಥಿರ ದೂರವಾಣಿ ಸಂಖ್ಯೆಗಳಿದ್ದವು. ಈಗ ಕೇವಲ 250 ಸಂಪರ್ಕ ಮಾತ್ರ ಉಳಿದಿವೆ ಎಂದು ಗುತ್ತಿಗೆ ಆಧಾರ ಮೇಲಿರುವ ಸಿಬ್ಬಂದಿ ಫೀರೋಜ ಖಾನ್ ಹೇಳುತ್ತಾರೆ.
ಪ್ರಸಕ್ತ ವರ್ಷ ಜನೇವರಿ ತಿಂಗಳಲ್ಲಿ ಒಟ್ಟು 22 ಸಿಬ್ಬಂದಿಗಳು ಸ್ವಯಂ ನಿವೃತ್ತಿ ಪಡೆದ ಹಿನ್ನಲೆಯಲ್ಲಿ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಬಿಎಸ್‍ಎನ್‍ಎಲ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೂ ತುಂಬಾ ತೊಂದರೆಯಾಗುತ್ತಿದೆ. ನಿವೃತ್ತಿ ಹೊಂದಿದ ಸಿಬ್ಬಂದಿಗಳ ಸ್ಥಳಗಳಲ್ಲಿ ಸರ್ಕಾರ ಹೊಸದಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿಲ್ಲ. ಇದರಿಂದ ಗ್ರಾಹಕರಿಗೆ ತೃಪ್ತಿದಾಯಕವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ತೆಗೆದುಕೊಳ್ಳಲಾಗಿದೆಯಾದರೂ ಅನುಭವ ಇರದ ಕಾರಣ ಸೇವೆಯಲ್ಲಿ ವಿಳಂಬವಾಗುತ್ತಿದೆ ಎಂದು ಜಮಖಂಡಿ ಹಾಗು ರಬಕವಿ-ಬನಹಟ್ಟಿ ಪ್ರಭಾರ ಜೆಟಿಓ ಬಿ. ಅನೀಲ ತಿಳಿಸಿದರು.

Social Plugin