ವನಸ್ಪತಿ ಔಷಧಿಯುಕ್ತ ಶುದ್ಧ ಹಾಲು
ಕಾಮಾಲೆ ಸಂದರ್ಭ ಹಾಲನ್ನು ಕುಡಿಯುತ್ತಿರುವದು
ಕಾಮಾಲೆ ರೋಗಕ್ಕೆ `ವನಸ್ಪತಿ’ ರಾಮಬಾಣ
*ಕಳೆದ 6 ದಶಕಗಳಿಂದ ಸೇವೆಯಲ್ಲಿರುವ `ಜಿಡ್ಡಿಮನಿ’ ಕುಟುಂಬ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಅ4: ಕಾಮಾಲೆ ರೋಗವು ಬಹುತೇಕರಿಗೆ ಸಹಜವಾಗಿ ಬಿಟ್ಟಿದೆ. ಇದಕ್ಕೆ ಅಲೋಪಥಿ ಬದಲಾಗಿ ಆರ್ಯುವೇದಿಕ್ ಔಷಧಿಯಾದ `ವನಸ್ಪತಿ’ಯೇ ರಾಮಬಾಣವಾಗಿದೆ ಎಂಬುದಕ್ಕೆ ಈಗಲೂ ಸಾಕ್ಷಿಯಾಗಿ ಕಾಣುತ್ತಿರುವದು ಬನಹಟ್ಟಿ ಪಟ್ಟಣದಲ್ಲಿ.
ಇಲ್ಲೊಂದು ಕುಟುಂಬ ಕಾಮಾಲೆ ಕಾಯಿಲೆಯಿರುವ ಜನರಿಗೆಂದೇ ಸೇವೆಯೊಂದಿಗೆ ಲಕ್ಷಾಂತರ ಜನರಿಗೆ ವನಸ್ಪತಿ ಔಷಧಿ ನೀಡುತ್ತ ಬಂದಿರುವದು ವಿಶೇಷವೇ ಸರಿ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಕನಕದಾಸ ವೃತ್ತ(ಕುರುಬರ ಓಣಿ)ದ ಬಳಿಯಲ್ಲಿರುವ ದಿ. ಬೀರಪ್ಪ ಜಿಡ್ಡಿಮನಿ ಎಂಬ ಕುಟುಂಬವು ಕಳೆದ 1960 ರಿಂದ ಇಂದಿನವರೆಗೂ ಪ್ರತಿ ಗುರುವಾರ ಹಾಗು ರವಿವಾರ ಮಾಳಿಂಗರಾಯ, ಕರೆಪ್ಪ ಹೀಗೆ ಹಲವಾರು ದೇವರ ಹೆಸರುಗಳಿಂದ `ವನಸ್ಪತಿ’ ಔಷಧಿ ನೀಡುತ್ತಾ ಜನಸೇವೆಗೆ ಪಾತ್ರರಾಗುವಲ್ಲಿ ಈ ಕುಟುಂಬ ಯಶಸ್ಸು ಕಂಡಿದೆ.
ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಹೀಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಆಗಮಿಸುವ ಜನರಿಗೆ ಸೇವಾ ಮನೋಭಾವದಲ್ಲಿಯೇ ವನಸ್ಪತಿ ಔಷಧಿಯನ್ನು ನೀಡುತ್ತಿದ್ದಾರೆ.
ಕೈಕಾಲು ನೋವು, ಹೊಟ್ಟೆ ನೋವು, ಸುಸ್ತು, ಮೈ ಜಿಡ್ಡು ಹಿಡಿಯುವದು. ಅಶಕ್ತಿ, ಊದಗಾಮಾಲೆ, ಹಸಿರುಗಾಮಾಲೆ, ಬಿಳಿಗಾಮಾಲೆ ಸೇರಿದಂತೆ ಇತರೆ ಶಾರೀರಿಕ ಸಮಸ್ಯೆಗಳಿಗೆ ಔಷಧಿ ತಯಾರಿಸಿ ನೀಡುತ್ತಾರೆ.
ಮನೆಯಲ್ಲಿಯೇ ತಯಾರಿ: ಮನೆಯಲ್ಲಿಯೇ ತಯಾರಿಸಿ ವನಸ್ಪತಿ ಔಷಧಿಯನ್ನು ಪ್ರತಿ ಗುರುವಾರ, ರವಿವಾರ ಹೀಗೆ ಮೂರು ಬಾರಿ ತೆಗೆದುಕೊಳ್ಳಬೇಕು. ಬೆಳಿಗ್ಗೆ 7 ರಿಂದ 10 ಗಂಟೆವರೆಗೆ ನಾಟುವ ಈ ಔಷಧಿಗೆ ಇಂದಿಗೂ ಭಾರಿ ಬೇಡಿಕೆಯಿದೆ. ಪ್ರತಿಯೊಬ್ಬರಿಗೆ ಮೂರು ದಿನಗಳಷ್ಟು ಔಷಧಿ ಪಡೆದರೂ ಕೇವಲ 50 ರೂ. ಮಾತ್ರ.
ಔಷಧಿ ಪಡೆಯುವ ವಿಧ: ವನಸ್ಪತಿ ಔಷಧಿಯನ್ನು ತಯಾರಿಸಿದ ಅರ್ಧ ಗಂಟೆಯೊಳಗಾಗಿ ಸೇವಿಸಬೇಕು. ತಡವಾದಲ್ಲಿ ಅದರ ಶಕ್ತಿ ಕಳೆದುಕೊಳ್ಳುವದು. ಬೆಳಿಗ್ಗೆ ಇದನ್ನು ಸೇವಿಸಿದ ನಂತರ ಆಕಳು ಹಾಲನ್ನು ಮಾತ್ರ ಸಂಜೆ 6 ಗಂಟೆವರೆಗೆ ಸೇವಿಸುತ್ತ ನೀರು, ಆಹಾರ ಸೇರಿದಂತೆ ಇತರೆ ಯಾವದೇ ವಸ್ತು ಸೇವನೆ ಮಾಡುವಂತಿಲ್ಲ. ಚಿಕ್ಕಮಕ್ಕಳು ಮಧ್ಯಾಹ್ನ 1 ಗಂಟೆವರೆಗೆ ಪಾಲಿಸಿದರೆ ಸಾಕು ಈ ಸಂದರ್ಭ ನಿದ್ರೆ ಮಾಡುವಂತಿಲ್ಲ. ನಿಯಮ ಪಾಲಿಸದಿದ್ದರೆ ಔಷಧಿ ನಾಟುವದಿಲ್ಲವೆನ್ನುತ್ತಾರೆ ಮಲ್ಲಪ್ಪ ಜಿಡ್ಡಿಮನಿ.
ಹುಟ್ಟಿದ ಮಗುವಿಗೂ ಕಾಮಾಲೆಯಾದರೆ, ಬಾಣಂತಿಯರು ಇದರ ಸೇವನೆಯಿಂದ ಎದೆ ಹಾಲಿನ ಮೂಲಕ ಒದಗಿಸಿದರೂ ಗುಣವಾಗುವಲಿದೆ ಎಂಬುದು ಸಾಬೀತಾಗಿದೆ. ಗರ್ಭೀಣಿ ಸ್ತ್ರೀಯರಿಗೆ ಕಾಮಾಲೆ ಸಂದರ್ಭ ವನಸ್ಪತಿ ಸೇವಿಸುವಂತಿಲ್ಲ.
ಕುಸ್ತಿ ಪಟುವಾಗಿದ್ದ ದಿ. ಭೀರಪ್ಪ ಜಿಡ್ಡಿಮನಿ 1960 ರಲ್ಲಿ ಧಾರವಾಡ ಜಿಲ್ಲೆಯ ಮುರಗುಂಡಿ ಕುಸ್ತಿಗೆ ತೆರಳಿದ ಸಂದರ್ಭ ವನಸ್ಪತಿ ಔಷಧಿ ಬಗ್ಗೆ ಅಲ್ಲಿನ ಅನುಭವಿಕರು ಹೇಳಿದ ನಂತರ ದೇವರ ಹೆಸರಿನಲ್ಲಿ ಪ್ರತಿ ಗುರುವಾರ ಹಾಗು ರವಿವಾರ ಮಾತ್ರ ಈ ವನಸ್ಪತಿ ಔಷಧಿಯನ್ನು ನೀಡುತ್ತ ಇಂದಿಗೂ ಬಹುತೇಕ ಕುಟುಂಬಗಳ ಸದಸ್ಯರಿಗೆ ಆಧಾರವಾಗಿದೆ. ಪ್ರತಿ ದಿನ ನೂರಾರು ಜನರು ಬೆಳಿಗಿನ ಜಾವ ಆಗಮಿಸುವ ಮೂಲಕ ಈ ಔಷಧಿ ಪಡೆದುಕೊಳ್ಳುವದು ಸಾಮಾನ್ಯ. ಹೆಚ್ಚಿನ ಮಾಹಿತಿಗೆ 88614-06748/80503-92974 ನಂಬರನ್ನು ಸಂಪರ್ಕಿಸಬಹುದು.
`ಯಾವದೇ ಆದಾಯಕ್ಕಾಗಿ ಔಷಧಿ ನೀಡುತ್ತಿಲ್ಲ. ಜನಸೇವೆಯೇ ಜನಾರ್ದನ ಸೇವೆಯೆಂದು ಕಳೆದ 6 ದಶಕಗಳಿಂದ ನಡೆಸಿಕೊಂಡ ಬಂದ ಸೇವೆ ಇದಾಗಿದೆ. ಕಾಮಾಲೆ ರೋಗಿಗಳಿಗೆ ಇದರಿಂದ ಒಳಿತಾಗುತ್ತಿರುವ ಹಿನ್ನಲೆ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.’-----ಮಲ್ಲಪ್ಪ ಭೀರಪ್ಪ ಜಿಡ್ಡಿಮನಿ.

Social Plugin