ಬನಹಟ್ಟಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ಸಭೆಯಲ್ಲಿ ಮಾತನಾಡಿದರು.

ತೇರದಾಳ ಕ್ಷೇತ್ರಕ್ಕೆ ಕರೆತಂದು ಶಾಸಕರನ್ನಾಗಿಸಿದ್ದು ನಾನು
ನಿನ್ನೆ-ಮೊನ್ನೆ ಬಂದವರಿಂದ ಉಚ್ಛಾಟನೆಯ ಬೆದರಿಕೆ
ರಬಕವಿ-ಬನಹಟ್ಟಿ,ಅ22: ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಚುನಾವಣೆ ನಡೆದಿವೆ ಅದರಲ್ಲಿ ಎರಡು ಬಾರಿ ಅದರಲ್ಲೂ ಪ್ರಪ್ರಥಮ ಬಾರಿಗೆ ಹಾಲಿ ಶಾಸಕ ಸಿದ್ದು ಸವದಿಯವರನ್ನು ಕರೆತಂದು ಬಿಜೆಪಿಯಿಂದ ಕಣಕ್ಕಿಳಿಸುವಲ್ಲಿ ಶ್ರಮಿಸಿದ್ಧೇನೆ. ಕೇವಲ ಸಹಕಾರಿ ಕ್ಷೇತ್ರದ ಚುನಾವಣೆಗೋಸ್ಕರ ನಿನ್ನೆ-ಮೊನ್ನೆ ಬಂದವರಿಂದ ಪಕ್ಷದಿಂದ ಉಚ್ಛಾಟಿಸುವ ಬೆದರಿಕೆ ನೀಡುವಲ್ಲಿ ಕುಮ್ಮಕ್ಕು ನೀಡುತ್ತಿರುವದು ಸಮಂಜಸವಲ್ಲ. ಅಷ್ಟಕ್ಕೂ ಸಹಕಾರಿ ಕ್ಷೇತ್ರದಲ್ಲಿ ಪಕ್ಷ ವಿರೋಧಿಯ ಪ್ರಶ್ನೆಯೇ ಬರುವದಿಲ್ಲವೆಂದು ಬಿಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ ಭೀಮಶಿ ಮಗದುಮ್ ಹೇಳಿದರು.
ಇಲ್ಲಿನ ಲಕ್ಷ್ಮೀ ನಗರದ ಪಿಕೆಪಿಎಸ್ ಸೊಸೈಟಿಯಲ್ಲಿ ತಮ್ಮ ನೂರಾರು ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೆ ಪಕ್ಷದ ಧುರೀಣರಾದ ಬಿ.ಎಸ್. ಸಿಂಧೂರ, ಬಿ.ಎ. ದೇಸಾಯಿ ಸೇರಿದಂತೆ ಅನೇಕರು ಇದೇ ರೀತಿ ಕಣಕ್ಕಿಳಿದಿದ್ದರು. ಆವಾಗ ಬಾರದ ವಿರೋಧಿ ಚಟುವಟಿಕೆ ಈಗೇಕೆ? ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಾಲಿ ನಗರ ಘಟಕದ ಅಧ್ಯಕ್ಷರು ಸೇರಿದಂತೆ ಅನೇಕರು ಪಕ್ಷದ ಚಿಹ್ನೆಯ ವಿರುದ್ಧವೇ ಪ್ರಚಾರ ಸಾರಿ ಅನ್ಯ ವ್ಯಕ್ತಿಯ ಗೆಲುವಿಗೆ ಪಕ್ಷ ಮುಖಭಂಗ ಅನುಭವಿಸುವಲ್ಲಿ ಕಾರಣವಾಗಿತ್ತು. ಈ ಕುರಿತು ಶಾಸಕ ಸಿದ್ದು ಸವದಿಯವರ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಲಿಲ್ಲ. ಇವೆಲ್ಲವನ್ನು ಹೊರತು ನನ್ನನ್ನು ಎಲ್ಲ ರೀತಿಯಿಂದ ಹಣಿಯಬೇಕೆಂಬ ಒಂದೇ ಉದ್ಧೇಶದಿಂದ ಕೆಲವರಿಂದ ಕುತಂತ್ರ ನಡೆಯುತ್ತಿದೆ. ಇದ್ಯಾವುದಕ್ಕೂ ಅವಕಾಶ ನೀಡುವದಿಲ್ಲ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ತನಕ ಪಕ್ಷದಿಂದಾಗುತ್ತಿರುವ ಶೋಷಣೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ 17 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಹಿರಿಯ ಕಾರ್ಯಕರ್ತನಾಗಿ ಶ್ರಮಿಸಿದ್ಧೇನೆ. ಅದೇ ರೀತಿ ಈ ಬಾರಿ ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ರಬಕವಿ-ಬನಹಟ್ಟಿ ತಾಲೂಕು ಪಿಕೆಪಿಎಸ್ ವಿಭಾಗದಿಂದ ತೀವ್ರ ಒತ್ತಾಯದ ಕಾರಣ ಸ್ಪರ್ಧೆ ನಿಶ್ಚಿತವೆಂದರು.
ನೂತನ ತಾಲೂಕಾಗಿರುವ ರಬಕವಿ-ಬನಹಟ್ಟಿಯನ್ನು ಪ್ರತ್ಯೇಕ ವಿಭಾಗವಾಗಿಸಿ ಸ್ಪರ್ಧೆಗೆ ನಿಲ್ಲುವಂತೆ ಶಾಸಕ ಸವದಿ ಸೂಚಿಸಿದ್ದರು. ಇದೀಗ ದಿಢೀರ್ ಬದಲಾಗಿ ಕೊನೆಯ ಗಳಿಗೆಯಲ್ಲಿ ಹೊಸೂರು ಸೊಸೈಟಿಯಲ್ಲಿ ಸದಸ್ಯರಾಗಿ ಕಣಕ್ಕಿಳಿದಿದ್ದು ಪೂರ್ವನಿಯೋಜಿತವಾಗಿದೆ ಎಂದರು.
ದುರ್ಬಳಕೆ: ತಾಲೂಕಿನ 22 ಸೊಸೈಟಿಗಳ ಪೈಕಿ 13 ಸದಸ್ಯರನ್ನು ದೂರದ ಸ್ಥಳಗಳಿಗೆ ಕಳಿಸಿ ಹಣ, ಅಧಿಕಾರ, ಪೊಲೀಸ್ ದುರ್ಬಳಕೆ ಮಾಡಿಕೊಂಡು `ಪ್ರತಿನಿಧಿ’ಗಳಿಗೆ ಕಿರಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ಅಧ್ಯಕ್ಷ ಸ್ಥಾನ ತಪ್ಪಿಸಿದರು: 2014 ರಲ್ಲಿ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ತಪ್ಪಿಸುವಲ್ಲಿ ಶಾಸಕರೇ ಕಾರಣರಾದರು. ರಾಜ್ಯಮಟ್ಟದ ಸಹಕಾರಿ ಪ್ರಕೋಷ್ಠದಲ್ಲಿದ್ದು, ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತನಾಗಿದ್ದೇನೆ ಎಂದು ಮಗದುಮ್ ಹೇಳಿದರು.
ವೇದಿಕೆ ಮೇಲೆ ಹಣಮಂತ ಸವದಿ, ರಾಜು ಉಳ್ಳಾಗಡ್ಡಿ, ಮಲ್ಲಪ್ಪ ವಾಲಿ, ಮಲ್ಲಪ್ಪ ಗಣಿ, ಸಿದ್ದು ಗೌಡಪ್ಪನವರ, ಸುರೇಶ ಕೋಲಾರ, ಎಸ್.ಬಿ. ಗೌಡಪ್ಪನವರ, ನಂದೆಪ್ಪ ನಂದೆಪ್ಪನವರ, ಸದಾಶಿವ ಮೇಲಗಿರಿ ಇದ್ದರು.