ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಸಭಾ ರಬಕವಿ ಬನಹಟ್ಟಿ ತಾಲ್ಲೂಕು ಘಟಕದಿಂದ ಮೀಸಲಾತಿ ಹೆಚ್ಚಿಸುವ ನಿಮಿತ್ತವಾಗಿ ಸರಣಿ ಧರಣಿ ಸತ್ಯಾಗ್ರಹ ನಡೆಯಿತು.

ಸಮುದಾಯದ ವಿದ್ಯಾರ್ಥಿಗಳು ಯುವಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ
ರಬಕವಿ-ಬನಹಟ್ಟಿ,ಅ21: ಸಮುದಾಯದ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು 42 ವರ್ಷಗಳಿಂದ ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಪರಿಶಿಷ್ಟ ಪಂಗಡದವರಿಗೆ ನೀಡುವ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕು ಮತ್ತು ನ್ಯಾ. ನಾಗಮೋಹನದಾಸರ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದಷ್ಟು ಬೇಗನೆ ಆದೇಶ ಹೊರಡಿಸಬೇಕು ಎಂದು ತಾಲ್ಲೂಕು ವಾಲ್ಮೀಕಿ ಘಟಕದ ಅಧ್ಯಕ್ಷ ರಮೇಶ ಮೆಳ್ಳಿಗೇರಿ ಅಗ್ರಹಿಸಿದರು.
ಅವರು ಬುಧವಾರ ಸ್ಥಳೀಯ ತಹಶೀಲ್ದಾರ ಕಾರ್ಯಾಲಯದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸರಣಿ ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಅಪಾರ ಜನಸಂಖ್ಯೆಯನ್ನು ಹೊಂದಿರುವ ವಾಲ್ಮೀಕಿ ನಾಯಕ ಸಮುದಾಯವು ನಾಡು ನಡಿಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಇಂದಿನ ಆಧುನಿಕ ದಿನಗಳಲ್ಲಿ ನಮ್ಮ ಸಮುದಾಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದ್ದರಿಂದ ಸರ್ಕಾರ ಗಮನ ಸೆಳೆಯುವುದರ ಸಲುವಾಗಿ ಸಮುದಾಯದವರು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇದೇ 21 ರಿಂದ 30 ರವರೆಗೆ ಸರಣಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಮೇಶ ಮೆಳ್ಳಿಗೇರಿ ತಿಳಿಸಿದರು. 
ಈ ಸಂದರ್ಭದಲ್ಲಿ ಕಾಡಪ್ಪ ಮಂಟೂರ, ರಾಮಣ್ಣ ದಳವಾಯಿ, ರಮೇಶ ನಾಯಕ, ಫಕೀರಪ್ಪ ತಳವಾರ, ಹುಚ್ಚಪ್ಪ ತಳವಾರ, ಪ್ರಭು ಅಮಾತ್ಯನವರ, ಸಂತೋಷ ದಂಡಿಮನಿ, ಶಿವಕುಮಾರ ಕುಲ್ಲೊಳ್ಳಿ, ರಮೇಶ ಮಂಟೂರ, ಮಾರುತಿ ಕುಳಸಿ ಸೇರಿದಂತೆ ಅನೇಕರು ಇದ್ದರು.