ನೀರಲ್ಲಿ ನಿಂತ ಅರಿಷಿಣ: ಗಡ್ಡೆಗಳಿಗೆ ಕೊಳೆ ರೋಗ ಭೀತಿ
ರಬಕವಿ-ಬನಹಟ್ಟಿ,ಅ22: ಬಾಗಲಕೋಟೆ ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶುಂಠಿ ಮತ್ತು ಅರಿಷಿಣ ಗಡ್ಡೆಗಳಿಗೆ ಗಡ್ಡೆ ಕೊಲೆ ರೋಗ ಬಾಧೆ ತಗಲುವ ಸಾಧ್ಯತೆಯಿದ್ದು, ರೈತರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲೂ ಸಹಿತ ಸಾಧ್ಯವಾಗದಷ್ಟು ಮಳೆ ನೀರು ಭೂಮಿಯಲ್ಲಿ ನಿಂತಿರುವದು ವಿಪರ್ಯಾಸದ ಸಂಗತಿಯಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಸುಮಾರು 5 ಸಾವಿರ ಎಕರೆಗೂ ಅಧಿಕ ಅರಿಷಿಣವನ್ನು ರೈತರು ಬೆಳೆದಿದ್ದಾರೆ. ಇದೀಗ ಗಡ್ಡೆಗಳು ನೀರಿನಲ್ಲಿ ನಿಂತಿವೆ. ಗಡ್ಡೆಗಳು ಕೊಳೆತು ಮೆತ್ತಗಾಗುವ ಲಕ್ಷಣಗಳಿದ್ದು, ಈ ಸಮಸ್ಯೆ ನಿಯಂತ್ರಣ ರೈತರಿಗೆ ಸವಾಲಾಗಿದೆ.
ಹಾನಿ ಭಯದಲ್ಲಿ ರೈತರು: ವಾಣಿಜ್ಯ ಬೆಳೆಯಾದ ಕಬ್ಬಿನಷ್ಟೇ ಪ್ರಮುಖ ಬೆಳೆಯನ್ನಾಗಿಸಿಕೊಂಡಿರುವ ಅರಿಷಿಣ ಬೆಳೆ ಈ ಬಾರಿ ರೈತರಿಗೆ ಮಾರಕವಾಗುವ ಲಕ್ಷಣಗಳು ಎದುರಾಗಿವೆ. ಉತ್ತಮ ಇಳುವರಿ ಸಂದರ್ಭ ಪ್ರತಿ ಕ್ವಿಂಟಲ್ ಅರಿಷಣಕ್ಕೆ 10 ರಿಂದ 12 ಸಾವಿರ ರೂ. ಬೆಲೆಯಿತ್ತು. ಸಾಮಾನ್ಯವಾಗಿ 5 ರಿಂದ 6 ಸಾವಿರ ದೊರಕಿದರೂ ರೈತರಿಗೆ ಹಾನಿಯಾಗಲಿದೆ. ಎಕರೆಗೆ 30 ರಿಂದ 35 ಕ್ವಿಂಟಲ್‍ನಷ್ಟು ಅರಿಷಿಣ ದೊರಕುತ್ತದೆ. ಈ ರೀತಿ ನೀರಿನಲ್ಲಿ ಬೆಳೆ ನಿಂತಿರುವ ಕಾರಣ 20 ರಿಂದ 25 ಕ್ವಿಂಟಲ್‍ವರೆಗೂ ದೊರಕುವ ಸಂಶಯವಾಗಿದೆ ಎನ್ನುತ್ತಾರೆ ಜಗದಾಳದ ರೈತ ಶಿವಲಿಂಗಯ್ಯ ಜಡೇಮಠ.
ಸದ್ಯದ ಕಾರ್ಯಕ್ಕೆ ತೊಡಕು: ಇದೀಗ ಎಲ್ಲೆಡೆ ಅರಿಷಿಣ ಬೆಳೆಯ ತಪ್ಪ ಕೋಯ್ಯುವ ಕಾರ್ಯ ನಡೆಯಬೇಕು. ಇನ್ನು 3 ತಿಂಗಳಿಗೆ ಬೆಳೆ ಸಂಪೂರ್ಣವಾಗಿ ಬರಬೇಕಿದೆ. ಹೀಗಿದ್ದಾಗ, ಮಳೆರಾಯನ ಅಟ್ಟಹಾಸದಿಂದ ಎಲ್ಲವನ್ನೂ ಬುಡಮೇಲಾಗಿಸಿದ್ದು, ಅರಿಷಿಣ ನಾಶವಾಗುವ ಸ್ಥಿತಿಗೆ ತಲುಪಿದೆ ಎಂದು ಹಿರೇಮಠ ಆತಂಕ ವ್ಯಕ್ತಪಡಿಸಿದರು.

Social Plugin