ಯಲ್ಲಟ್ಟಿಯಲ್ಲಿ ಮಕ್ಕಳ ಸಾಹಿತಿ ಪ.ಗು. ಸಿದ್ಧಾಪೂರ ಅವರ `ಕರುಣಾಂಜಲಿ’ ಯಶೋಗಾಥೆ ಕಾವ್ಯಕೃತಿಯನ್ನು ಮರೆಗುದ್ದಿಯ ಡಾ. ನಿರುಪಾಧೀಶ್ವರ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.

ಆತ್ಮ ಶೋಧದ ಕಾವ್ಯ ಹೆಚ್ಚು ರಚನೆಯಾಗಲಿ
ರಬಕವಿ-ಬನಹಟ್ಟಿ,ಅ9: ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಆತ್ಮ ಸಾಕ್ಷಾತ್ಕಾರ ಹಾಗು ಆತ್ಮಶೋಧನೆ ಕಾವ್ಯ ಹೇರಳವಾಗಿ ಕಾಣುತ್ತೇವೆ. ಆದರೆ ಇತ್ತೀಚಿನ ಸಂದರ್ಭದಲ್ಲಿ ಕನ್ನಡ ಕಾವ್ಯ, ಕನ್ನಡ ಕೃತಿಗಳು ಈ ಹಾದಿಯಲ್ಲಿ ಜಾಸ್ತಿ ಹೋಗುತ್ತಿಲ್ಲವೆಂದು ಮರೆಗುದ್ದಿಯ ಡಾ. ನಿರುಪಾಧೀಶ್ವರ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
ಸಮೀಪದ ಯಲ್ಲಟ್ಟಿಯ ನಿರುಪಾಧೀಶ್ವರ ಸಮುದಯ ಭವನದಲ್ಲಿ ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ಧಾಪೂರ ಅವರ `ಕರುಣಾಂಜಲಿ’ ಯಶೋಗಾಥೆ ಕಾವ್ಯಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಆತ್ಮದ ಶೋಧವೆಂದರೆ ಕೇವಲ ಕವಿಯ ಆತ್ಮಶೋಧ ಮಾತ್ರ ಅಷ್ಟೇ ಆಗಿರದೆ, ವ್ಯವಸ್ಥೆಯ ಕುರಿತಾದ ಶೋಧವೂ ಅದರಲ್ಲಿ ಒಳಗೊಂಡಿರುತ್ತದೆ. ಕವಿಯ ಆತ್ಮಶೋಧನೆ ಜಗತ್ತಿನ ಶೋಧನೆಯ ಕಾವ್ಯವೂ ಆಗಿರುತ್ತದೆ ಎಂದರು.
ಸಾಹಿತ್ಯ, ಸಾಮಾಜಿಕ, ಸಾಂಸ್ಕ್ರತಿ, ರಾಜಕೀಯ ಆಧ್ಯಾತ್ಮಿಕ ಸಂಘರ್ಷಗಳಿಲ್ಲದೇ ಇರುವ ಸಂದರ್ಭದಲ್ಲಿ ಕಾವ್ಯ ರಚಿಸಿದಾಗ ಉತ್ಕ್ರಷ್ಟ ಕಾವ್ಯ ಮೂಡಿಬರುವದಿಲ್ಲ. ಕವಿ ತನ್ನ ಭಾವನೆ, ಅನುಭವ, ತಿಳುವಳಿಕೆ, ಜ್ಞಾನದೊಂದಿಗೆ ಸಂಘರ್ಷ ಮಾಡುತ್ತಲೇ ಇರಬೇಕು. ಆ ಸಂಘರ್ಷದ ತೀವ್ರತೆಯಲ್ಲಿ ಉತ್ಕ್ರಷ್ಟವಾದ ಕಾವ್ಯ ಹೊರಬರಲು ಸಾಧ್ಯವೆಂದರು. ಕರುಣಾಂಜಲಿ ಕಾವ್ಯಕೃತಿಯು ತಂದೆ-ತಾಯಿ, ಮಕ್ಕಳ ಬಾಂಧವ್ಯ, ನಡಾವಳಿ ಕುರಿತಾಗಿ ಸುಂದರ ಕುಟುಂಬಕ್ಕೆ ಒಳ್ಳೆಯ ಕೃತಿಯಾಗಿದೆ ಎಂದರು.
ಕಸಾಪ ಮಾಜಿ ತಾಲೂಕಾಧ್ಯಕ್ಷ ಮಧುಕೇಶ್ವರ ಬೆಳಗಲಿ, ಎಚ್.ವಾಯ್. ಆಲಮೇಲ, ಕುಮಾರಿ ಯಮುನಾ ಸಿದ್ಧಾಪೂರ ಇದ್ದರು.