ತೇರದಾಳದ ಶ್ರೀ ಅಲ್ಲಮಪ್ರಭು ದೇವಸ್ಥಾನದಲ್ಲಿ ಸಂಜೆ ಸಾಯಂಕಾಲಕ್ಕೆ ದೀಪ ನಗಾರಿ ವಿಶೇಷವಾದ ಪೂಜೆಯ ಸಮಯದಲ್ಲಿ ಬೆಳ್ಳಿಯ ಆಭರಣಗಳೆಲ್ಲವೂ ಬಂಗಾರಮಯವಾಗಿ ಕಾಣುತ್ತವೆ.

ತೇರದಾಳ : ವಿಶೇಷ ಸೇವೆಗಳಿಗೆ ಹೆಸರಾದ ಐತಿಹಾಸಿಕ ಪಟ್ಟಣದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ದಿನಾಲು ಸಂಜೆ ದೀಪ ನಗಾರಿಯಾಗುವುದು ವಿಶೇಷ, ಅದರಲ್ಲೂ ದಸರಾ ಹಬ್ಬದ ನಿಮಿತ್ಯ ಈ ದೀಪ ನಗಾರಿ ಸೇವೆ ನೋಡುವುದೇ ಒಂದು ಭಾಗ್ಯ.

  ವಿಶೇಷವೆಂದರೆ ಈ ದಿನ ಮಾತ್ರ ಕೆಲವು ಬೆಳ್ಳಿಯ ಆಭರಣಗಳನ್ನು ಶ್ರೀಅಲ್ಲಮಪ್ರಭು ದೇವರ ಜಾಗೃತ ಗದ್ದುಗೆ ಮೇಲೆ ಅಲಂಕರಿಸಿರುತ್ತಾರೆ. ಆ ಬೆಳ್ಳಿ ಆಭರಣಗಳೆಲ್ಲವೂ ಈ ದೀಪ ನಗಾರಿಯ ಸಮಯದಲ್ಲಿ ನೋಡುವ ಸದ್ಭಕ್ತರಿಗೆ ಬಂಗಾರದ ಆಭರಣಗಳ ಹಾಗೆ ಕಾಣುವುದು ಈ ದೀಪ ನಗಾರಿಯ ವಿಶೇಷ ಸೇವೆ. ಶತಶತಮಾನಗಳಿಂದ ನಡೆದು ಬಂದಿರುವ ಸೇವೆಗಳಲ್ಲಿ ಈ ದೀಪ ನಗಾರಿ ಸೇವೆ ಒಂದು. ಮೊದಲಿನ ಕಾಲದಿಂದಲೂ ದೇವಸ್ಥಾನದಲ್ಲಿ ಸಂಜೆ ದೀಪ ಹಚ್ಚಿದ ನಂತರ ಪಟ್ಟಣದ ಮನೆ ಮನೆಗಳಲ್ಲಿ ದೀಪ ಬೆಳಗುತ್ತಿದ್ದವು ಎಂದು ಪ್ರತೀತಿ ಇದೆ. ಅಂದಿನಿಂದಲೂ ಇಂದಿನವರೆಗೆ  ದಿನಾಲೂ ಸಾಯಂಕಾಲ ಹೊತ್ತು ಮುಳುಗುವುದಕ್ಕೂ ಮುನ್ನ ದೇವಸ್ಥಾನದಲ್ಲಿ ದೀಪ ನಗಾರಿ ನಡೆಯುತ್ತದೆ. 

   ಅಂದಿನಿಂದಲೂ ನಡೆದು ಬಂದಿರುವ ದೀಪ ನಗಾರಿಯ ಸಮಯದಲ್ಲಿ ದೇವಸ್ಥಾನದ ಶ್ರೀ ಅಲ್ಲಮಪ್ರಭು ದೇವರ ಜಾಗೃತ ಗದ್ದುಗೆಯ ಮೇಲೆ ಬೆಳ್ಳಿ ಆಭರಣಗಳೆಲ್ಲವೂ ಬಂಗಾರದ ವರ್ಣದಂತೆ ಕಾಣುತ್ತಿವೆ.  ದೇವಸ್ಥಾನದಲ್ಲಿ ಒಂದು ವಿಶೇಷ ಗರ್ಭ ಗುಡಿಯಲ್ಲಿ ಯಾವುದೇ ವಿದ್ಯುತ್ ದೀಪಗಳಿಲ್ಲ. ಮೊದಲಿನಿಂದಲೂ ಗರ್ಭ ಗುಡಿಯಲ್ಲಿ ನಂದಾ ದೀಪಗಳನ್ನು ಬೆಳಗಿಸಿರುತ್ತಾರೆ. ಆ ನಂದಾ ದೀಪಗಳಿಂದ ಬೆಳ್ಳಿಯ ಆಭರಣಗಳೆಲ್ಲವೂ ಬಂಗಾರದ ಬಣ್ಣದಂತೆ ಹೊಳೆಯುತ್ತವೆ. ಬೆಳ್ಳಿ ಆಭರಣಗಳು ಹೇಗೆ ಬಂಗಾರದ ವರ್ಣಕ್ಕೆ ಬರುತ್ತವೆ ಎಂಬುವುದು ಗೊತ್ತಾಗುವುದೇ ಇಲ್ಲ. ಈ ವಿಶೇಷ ಪೂಜೆಯನ್ನು ವಿಜಯ ದಶಮಿಯಂದು ಸಾಕಷ್ಟು ಭಕ್ತರು ನೋಡಿ ಕಣ್ತುಂಬಿ ಕೊಂಡು ಪ್ರಭುವಿನ ಆಶೀರ್ವಾದಕ್ಕೆ ಪಾತ್ರರಾದರು. ಅರ್ಚಕರಾದ ಆನಂದ ಹಿತ್ತಲಮನಿ, ಮಗಯ್ಯ ಹಿತ್ತಲಮನಿ, ರಾಜು ಹಿತ್ತಲಮನಿ, ಗುಹೇಶ್ವರ ಹಿತ್ತಲಮನಿ, ಪ್ರಕಾಶ ಕಾಡದೇವರ, ಶಿವಾನಂದ ಬಡಿಗೇರ ಸೇರಿದಂತೆ ನೂರಾರು ಸದ್ಭಕ್ತರು ಇದ್ದರು.