ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಪ್ರಬಲ ಆಕಾಂಕ್ಷಿ ನಿಜ
ರಬಕವಿ-ಬನಹಟ್ಟಿ,ಅ17: ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ರಬಕವಿ-ಬನಹಟ್ಟಿ ತಾಲೂಕಿನ ಪಿಕೆಪಿಎಸ್ ವಿಭಾಗದಿಂದ ನಾವೂ ಕೂಡ ಪ್ರಬಲ ಆಕಾಂಕ್ಷಿಗಳಾಗಿ ಕಣಕ್ಕಿಳಿಯಬೇಕೆಂಬುದು ನಿಜವೆಂದು ತೇರದಾಳ ಭಾಗದ ರಮೇಶ ಕಿತ್ತೂರ ಹಾಗು ಮಹಾಲಿಂಗಪೂರ ಭಾಗದಿಂದ ಬಸನಗೌಡ ಪಾಟೀಲ ಸ್ಪಷ್ಟನೆ ನೀಡಿದರು.
`ಸಂಯುಕ್ತ ಕರ್ನಾಟಕ’ದೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯೇ ನಾನು ಸ್ಪರ್ಧಿಸಬೇಕೆಂದಿದ್ದೆ, ಮತ್ತೊಮ್ಮೆ ಭೀಮಶಿ ಮಗದುಮ್ ಅವರಿಗೆ ಅವಕಾಶ ಕಲ್ಪಿಸಬೇಕೆಂದು ಪಕ್ಷದಲ್ಲಿ ಒತ್ತಡ ಬಂದ ನಂತರ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾಯಿತು. ಈ ಬಾರಿಯೂ ಸ್ಪರ್ಧೆಗೆ ತೀವ್ರ ಪೈಪೋಟಿಯೊಡ್ಡಿದ್ದರೂ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೆಂದು ಮಗದುಮ್ ಅವರ ಒತ್ತಾಯವಾಗಿತ್ತು. ತಾಲೂಕಿನ 23 ಪಿಕೆಪಿಎಸ್ ಸೊಸೈಟಿಗಳಿಂದ 10 ಜನ ಹಿರಿಯರ ಸಮ್ಮುಖ ಆಯ್ಕೆ ಸಮಿತಿ ರಚಿಸಿ ಅದರಲ್ಲಿ ಶಾಸಕರ ಹೆಸರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ನಾವೆಲ್ಲ ಸಹಮತ ತೋರಿದ್ದೇವೆಂದು ಆಕಾಂಕ್ಷಿಗಳಾದ ಕಿತ್ತೂರ ಹಾಗು ಪಾಟೀಲ ಸ್ಪಷ್ಟಪಡಿಸಿದರು.
`ಪ್ರತಿನಿಧಿ’ಗಳು ಸ್ವಯಂ ತೆರಳಿದ್ದೇವೆ: ಚುನಾವಣೆ ಸಂದರ್ಭ `ಪ್ರತಿನಿಧಿ’(ಡೆಲಿಗೇಟ್ಸ್)ಗಳಿಗೆ ಸಮಸ್ಯೆಯುಂಟಾಗಬಾರದೆಂಬ ಉದ್ದೇಶದಿಂದ 13 ಕ್ಕೂ ಅಧಿಕ ಜನರು ಸ್ವಯಂ ಪ್ರೇರಿತವಾಗಿ ಒಂದೆಡೆ ಸೇರಿದ್ದೇವೆ. ನಾವು ಯಾರ ಬೆದರಿಕೆಗೂ ಅಥವಾ ಯಾರೂ ಕಟ್ಟಿ ಹಾಕುವ ಕಾರ್ಯ ನಡೆದಿಲ್ಲ. ಇವೆಲ್ಲ ಸತ್ಯಕ್ಕೆ ದೂರದ ಸಂಗತಿಯೆಂದರು.