ಪಕ್ಷದ ಹಿತದೃಷ್ಟಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ-ಸವದಿ

*ಹಿರಿಯರ ಅಪೇಕ್ಷೆಯಿದೆ. ಬೇಡವೆಂದರೆ ಕಣಕ್ಕಿಳಿಯುವದೇ ಇಲ್ಲ

ರಬಕವಿ-ಬನಹಟ್ಟಿ,ಅ16: ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ರಬಕವಿ-ಬನಹಟ್ಟಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂಬ ಆಸೆ ನನಗಿಲ್ಲ. ಕ್ಷೇತ್ರದ ಹಿರಿಯರ ಒತ್ತಾಯ ಹಾಗು ಅಪೇಕ್ಷೆ ಮೆರೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಸ್ಪರ್ಧೆ ಬೇಡವೆಂದರೇ ತಕ್ಷಣವೇ ಹಿಂದೆ ಸರಿಯುವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಸ್ಪಷ್ಟಪಡಿಸಿದರು.

ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಯೋಗ್ಯ ಅಭ್ಯರ್ಥಿ ಆಯ್ಕೆಯಲ್ಲಿ ಹಿರಿಯ ನಿರ್ದೇಶಕ ಭೀಮಶಿ ಮಗದುಮ್ ಒಳಗೊಂಡು 10 ಜನ ಆಕಾಂಕ್ಷಿ ಪಟ್ಟಿಯಲ್ಲಿದ್ದರು. ನಾನು ಎಂದಿಗೂ ಆಕಾಂಕ್ಷಿ ಅಥವಾ ಯಾರ ಮೇಲೆ ಒತ್ತಡವನ್ನೂ ತಂದಿಲ್ಲ. ಈ ಬಾರಿ ಮಹಾಲಿಂಗಪೂರ ಅಥವಾ ತೇರದಾಳ ವಿಭಾಗಕ್ಕೆ ಸ್ಥಾನ ಕಲ್ಪಿಸಬೇಕೆಂಬ ಒತ್ತಡವೂ ಸಭೆಯಲ್ಲಿತ್ತು. ಇವೆಲ್ಲ ನಂತರ ಎಲ್ಲ ಆಕಾಂಕ್ಷಿಗಳ ತೀವ್ರ ಪೈಪೋಟಿಯಿಂದಾಗಿ ಪಕ್ಷದಲ್ಲಿ ಯಾವದೇ ಗೊಂದಲ ಅಥವಾ ಸಮಸ್ಯೆಯುಂಟಾಗದಂತೆ ಪಕ್ಷದ ಹಿತ ಕಾಪಾಡಲು ಈ ಭಾರಿ ಸ್ಪರ್ಧೆಗೆ ಒಪ್ಪಿಕೊಳ್ಳಲೇಬೇಕೆಂಬ ಒತ್ತಡದಿಂದ ಕಣಕ್ಕಿಳಿದಿದ್ದೇನೆ. ತಕ್ಷಣವೇ ಸ್ಪರ್ಧೆಗೆ ಬೇಡವೆಂದು ಹಿರಿಯರು ತಿಳಿಸಿದ್ದಲ್ಲಿ ಕಣಕ್ಕಿಳಿಯುವದೇ ಇಲ್ಲವೆಂದು ಸವದಿ ತಿಳಿಸಿದರು.

ತಪ್ಪು ಆರೋಪ ಸಲ್ಲದು: ವಿನಾಕಾರಣ ತಪ್ಪು ಗ್ರಹಿಕೆಯಿಂದ ನನ್ನನ್ನು ದೂರುತ್ತಿರುವದು ಸರಿಯಲ್ಲ. ಸ್ಪರ್ಧೆಯ ಅವಶ್ಯಕತೆಯೂ ನನಗಿಲ್ಲ. ಇವೆಲ್ಲವನ್ನು ಅರಿತು ಮಗದುಮ್ ಮಾತನಾಡಬೇಕೆಂದರು.

ಹಸ್ತಕ್ಷೇಪವಿಲ್ಲ: ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಆಯಾ ಪಿಕೆಪಿಎಸ್ ಸೊಸೈಟಿಗಳಲ್ಲಿ ಮತದಾನದಿಂದ `ಪ್ರತಿನಿಧಿ’ ಆಯ್ಕೆ ನಡೆದಿದೆ. ಯಾರದೇ ಹಸ್ತಕ್ಷೇಪವಿಲ್ಲ. ಮತದಾನ ನಂತರ ಸಾಮಾನ್ಯವಾಗಿ ಕೆಲ ಸೊಸೈಟಿಗಳ `ಪ್ರತಿನಿಧಿ’ಗಳು ಸ್ವಯಂಪ್ರೇರಿತವಾಗಿ ಗೌಪ್ಯ ಸ್ಥಳಕ್ಕೆ ತೆರಳಿರಬಹುದು. ಇನ್ನೂ ಅನೇಕ ಸೊಸೈಟಿಗಳ `ಪ್ರತಿನಿಧಿ’ಗಳು ಜನರ ಮಧ್ಯಯೇ ಇದ್ದಾರೆ. ಇದ್ಯಾವದಕ್ಕೂ ಬಣ್ಣ ಹಚ್ಚುವ ಪ್ರಶ್ನೆಯಿಲ್ಲವೆಂದು ಸವದಿ ಮಗದುಮ್ ಆರೋಪಕ್ಕೆ ಟಾಂಗ್ ನೀಡಿದರು.