ರಬಕವಿ-ಬನಹಟ್ಟಿ,ಅ16: ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಪಿಕೆಪಿಎಸ್ ವಿಭಾಗದಿಂದ ರಬಕವಿ-ಬನಹಟ್ಟಿ ಕ್ಷೇತ್ರದಿಂದ ಹಾಲಿ ಸದಸ್ಯ ಭೀಮಶಿ ಮಗದುಮ್ ಕಣಕ್ಕಿಳಿಯುವದಾಗಿ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಸ್ವಪಕ್ಷದ ಶಾಸಕರಾದ ಸಿದ್ದು ಸವದಿ ವಿರುದ್ಧ ಶೆಡ್ಡು ಹೊಡೆಯಲು ಪೂರ್ಣ ತಾಲೀಮು ನಡೆಸುತ್ತಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಕಣಕ್ಕಿಳಿಯಲಿದ್ದೇನೆ. ಪಕ್ಷದ ಹೈಕಮಾಂಡ್, ಜಿಲ್ಲಾ ಕೋರ್ ಕಮಿಟಿಗೂ ಈ ವಿಷಯ ಅರಿವಿದೆ. ಚುನಾವಣೆಯಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲವೆಂದು ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆಯೆಂದು ರಾಷ್ಟ್ರದ ನಾಯಕರೇ ಸಂದೇಶ ರವಾನಿಸಿದ್ದಾರೆ. ಆದರೆ ಸ್ಥಳೀಯ ಶಾಸಕರು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕರ್ತರ ಏಳ್ಗೆಗೆ ಸಹಕರಿಸುವ ಬದಲಾಗಿ ತಾವೇ ಸ್ಪರ್ಧೆಗಿಳಿದಿರುವದು ದುರದೃಷ್ಟಕರವೆಂದು ಬೇಸರ ವ್ಯಕ್ತಪಡಿಸಿದರು.
ಸ್ಪರ್ಧೆ ಪೂರ್ವ ನಿಯೋಜಿತವಾಗಿದೆ- ಶಾಸಕ ಸಿದ್ದು ಸವದಿ ಚುನಾವಣೆಗೆ ಸಾಂಧರ್ಬಿಕ ಶಿಶುವೆಂದು ಹೇಳುತ್ತಿದ್ದಾರೆ. ಪೂರ್ವ ತಯಾರಿಯಲ್ಲಿ ಕಾರ್ಯಕರ್ತರನ್ನು ತುಳಿಯುವ ಕಾರ್ಯ ಶಾಸಕರಿಂದ ನಡೆಯುತ್ತಿದೆ. ಜಮಖಂಡಿ ತಾಲೂಕಿನ ಹಿರೇಪಡಸಲಗಿಯಲ್ಲಿ ಸದಸ್ಯರಾಗಿದ್ದು, ಸಾಲಗಾರರೂ ಇದ್ದಾರೆ. ಹೀಗಿದಾಗ ಒಂದೇ ಸಮಯದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಿನ ಪಿಕೆಪಿಎಸ್‍ನಲ್ಲಿ ಸದಸ್ಯರಾದದ್ದು ಹೇಗೆ? ಅನೇಕ ಕಾರ್ಯಕರ್ತರು ತಾಲೂಕಿನಲ್ಲಿದ್ದಾಗ್ಯೂ ಶಾಸಕರಿಗೇ ಇಚ್ಛಾಶಕ್ತಿ ಏಕೆ? ಹೀಗೆ ಹಲವಾರು ಪ್ರಶ್ನೆಗಳನ್ನೇ ಸುರಿಸಿದರು.
ಎರಡು ಬಾರಿ ಅನುಭವವಿದೆ: ಕಳೆದ ಎರಡು ಬಾರಿ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಭಾರಿಯೂ ಕೊನೆಯವರೆಗೂ ಸ್ಪರ್ಧಿಸುವಂತೆ ಸಹಕರಿಸುತ್ತ ಇದೀಗ 6 ಸೊಸೈಟಿಗಳಿಗೆ ಯಾವದೇ ಮತದಾನ ಮಾಡದೆ ರಾಜಕೀಯ ಒತ್ತಡ ಬಳಸಿ `ಪ್ರತಿನಿಧಿ’ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಚುನಾವಣೆ ಕಣದಲ್ಲಿ ನನಗೇ ಉಳಿಯುವಂತೆ ಹೆಚ್ಚಿನವರ ಆಸಕ್ತಿಯಿದ್ದರೂ, ಬದಲಾಗಿ ಸವದಿಯವರ ಪರವೆಂದು ಸುಳ್ಳು ಹೇಳುತ್ತ ಕಾರ್ಯಕರ್ತರಿಗೆ ಅನ್ಯಾಯವೆಸಗುತ್ತಿದ್ದಾರೆಂದು ನೇರ ಆರೋಪ ಮಾಡಿದರು.
ತಾಲೂಕಿನಲ್ಲಿ 26 ಪಿಕೆಪಿಎಸ್ ಬ್ಯಾಂಕ್‍ಗಳ ಪೈಕಿ 23 ಸೊಸೈಟಿಗಳು ಬಿಜೆಪಿ ಪರವಾದ ಸದಸ್ಯರಿದ್ದಾರೆ. ಇವೆಲ್ಲದಕ್ಕೂ ನಾನೇ ಶ್ರಮಿಸಿ ಅಷ್ಟೊಂದು ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಿಷ್ಠಗೊಳಿಸುವಲ್ಲಿ ಕಾರಣವಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಶಾಸಕರ ನಡೆ ಸಲ್ಲದು ಎಂದು ಭೀಮಶಿ ಮಗದುಮ್ ತಿಳಿಸಿದರು.
Social Plugin