ತೇರದಾಳ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಕಾಲನಿಯಲ್ಲಿ ನಿನ್ನೆ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ಚರಂಡಿ ನೀರು.
ಭಾರಿ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ಚರಂಡಿ ನೀರು
ತೇರದಾಳ : ಮಂಗಳವಾರ ಸಾಯಂಕಾಲ ಸುರಿದ ಭಾರಿ ಮಳೆಯಿಂದಾಗಿ ಚರಂಡಿ ನೀರೆಲ್ಲವು ಅಂಬೇಡ್ಕರ ಕಾಲೋನಿಯಲ್ಲಿನ ಮನೆಗಳಿಗೆ ನುಗ್ಗಿ ಅಲ್ಲಿನ ಜನರ ನಿದ್ದೆಗೆಡಿಸಿದೆ. ಇಷ್ಟೆಲ್ಲ ಅನಾಹುತಗಳಾದರು ನಮ್ಮ ಸಮಸ್ಯೆಗೆ ಇಲ್ಲಿನ ಪುರಸಭೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲವೆಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಸಾಯಂಕಾಲ ಮಳೆಯಾದ ನಂತರ ಚರಂಡಿ ನೀರೆಲ್ಲವು ಕಾಲೋನಿಯಲ್ಲಿ ಮನೆಗಳಲ್ಲಿ ಸಂಗ್ರಹವಾಗಿತ್ತು. ಅಲ್ಲಿನ ನಿವಾಸಿಗಳು ಇಡೀ ರಾತ್ರಿ ಮನೆ ಸೇರಿದ ನೀರನ್ನು ಖಾಲಿ ಮಾಡುವುದರಲ್ಲಿಯೇ ಕಳೆದರು. ಅಲ್ಲಿನ ನಿವಾಸಿಗಳು ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಜನರಿದ್ದಾರೆ. ಮುಂಜಾನೆಯೆದ್ದು ಕೂಲಿಗೆ ಹೋದರೆಂದರೆ ಮರಳಿ ರಾತ್ರಿಯೇ ಮನೆಗೆ ಬರುತ್ತಾರೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮನೆಯಲ್ಲಿ ನೀರು ನುಗ್ಗಿದನ್ನು ಕಂಡು ಅಡುಗೆಯನ್ನು ಸಹ ಮಾಡದೇ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ತೊಡಗಿದರು. ದುಡಿದು ಬಂದು ನೆಮ್ಮದಿಯಿಂದ ನಿದ್ದೆ ಮಾಡುವಂತ ಸ್ಥಿತಿಯು ನಮ್ಮಲ್ಲಿ ಇಲ್ಲ ಎಂದು ಪುರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ರಾತ್ರಿಯೆಲ್ಲ ಮಹಿಳೆಯರು ಮಕ್ಕಳು ನಿದ್ದೆಯಿಲ್ಲದೆ ನೀರಲ್ಲಿಯೇ ನಿಂತರು ಎಂದು ಅಲ್ಲಿನ ನಿವಾಸಿಗಳು ಪತ್ರಿಕೆಗೆ ತಿಳಿಸಿದರು.
ಪಟ್ಟಣದಲ್ಲಿನ ಚರಂಡಿ ನೀರೆಲ್ಲವೂ ಮೊದಲು ದೊಡ್ಡ ಚರಂಡಿ ಮೂಲಕ ಹಳವನ್ನು ಸೇರುತ್ತಿತ್ತು. ಆದರೆ ಈಗ ಚರಂಡಿ ನೀರು ಹಳ್ಳವನ್ನು ಸೇರಲು ದಾರಿಯಿಲ್ಲದಂತಾಗಿದೆ. ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ನೀರು ಮುಂದೆ ಹೋಗಲು ದಾರಿಯಿಲ್ಲದೆ ಚರಂಡಿಯಲ್ಲಿಯೇ ಸಂಗ್ರಹವಾಗಿ ಚರಂಡಿ ತುಂಬಿ ಮನೆಗಳಿಗೆ ನುಗ್ಗಿದೆ. ಈ ಕುರಿತು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿಗಳನ್ನು ಕೊಟ್ಟರು ಏನೂ ಪ್ರಯೋಜನವಾಗಿಲ್ಲ. ಇದಕ್ಕೆ ಶಾಸ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಅಜೀತ ಹಟ್ಟೆನ್ನವರ, ಸೇವಂತಿ ಯಳಕಾರ, ಆಶಾ ಕಾಂಬಳೆ ಸೇರಿದಂತೆ ಇನ್ನಿತರರ ಮನೆಗಳಲ್ಲಿ ಬುಧವಾರ ಮಧ್ಯಾನದವರೆಗೆ ಮನೆಯಲ್ಲಿನ ನೀರನ್ನು ಹೊರ ಹಾಕುತಿದ್ದರು. ಈ ವಾರ್ಡಿನಿಂದ ಪುರಸಭೆಗೆ ಆಯ್ಕೆಯಾದ ಆಧಿನಾಥ ಸಪ್ತಸಾಗರ ಮಾತನಾಡಿ ನಾನು ಸಾಕಷ್ಟು ಭಾರಿ ಪುರಸಭೆ ಮುಖ್ಯಾಧಿಕಾರಿಗೆ ಸಮಸ್ಯೆಯನ್ನು ಹೇಳಲಾಗಿದೆ ಆದರೂ ಅವರು ಈ ಸಮಸ್ಯೆಗೆ ಸ್ಪಂಧಿಸುತ್ತಿಲ್ಲವೆಂದರು. ಇಲ್ಲಿನ ನಿವಾಸಿಗಳೊಂದಿಗೆ ರಾತ್ರಿಯೆಲ್ಲ ನೀರನ್ನು ತಗೆಯುವುದರಲ್ಲಿ ಭಾಗಿಯಾಗಿದ್ದೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ ದೊಡಮನಿ, ಪರಶುರಾಮ ಕಾಂಬಳೆ, ಪ್ರಭು ರೋಡಕರ, ಸುರೇಶ ಹಟ್ಟೆನ್ನವರ, ವಿಠ್ಠಲ ಹಟ್ಟೆನ್ನವರ ಸೇರಿದಂತೆ ಇನ್ನಿತರರು ಇದ್ದರು.
Social Plugin