ಬನಹಟ್ಟಿಯ ಗಾಂಧಿ ವೃತ್ತದಲ್ಲಿರುವ ಪೊಲೀಸ್ ಗೃಹಗಳು ಸಂಪೂರ್ಣ ಹಾಳು ಬಿದ್ದಿರುವದು.

ಪಾಳು ಬಿದ್ದ ಪೊಲೀಸ್ ವಸತಿ ಗೃಹಗಳು
*ಸಂಜೆಯಾಗುತ್ತಿದ್ದಂತೆ ಕುಡುಕರ, ಜೂಜುಕೋರರ ಅಡ್ಡೆ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಅ6: ನಗರದ ಹೃದಯ ಭಾಗವಾದ ಗಾಂಧಿ ವೃತ್ತದ ಬಳಿಯ ತರಕಾರಿ ಮಾರುಕಟ್ಟೆಯಲ್ಲಿರುವ ಪೊಲೀಸ್ ವಸತಿ ಗೃಹಗಳು ವಾಸಿಸಲು ಯೋಗ್ಯವಿದ್ದರೂ ಇಲಾಖೆಯ ತೀವ್ರ ನಿರ್ಲಕ್ಷ್ಯದಿಂದ ಕಳೆದ 20 ವರ್ಷಗಳಿಂದ ಸಂಪೂರ್ಣ ಹಾಳು ಬಿದ್ದು ವಸತಿ ಗೃಹಗಳಿಗೆ ವಾರಸುದಾರರಿಲ್ಲದೆ ಸುತ್ತಲಿನ ಕುಟುಂಬಗಳಿಗೆ ತೀವ್ರ ಆತಂಕ ಸೃಷ್ಟಿಸುವಲ್ಲಿ ಕಾರಣವಾಗಿದೆ.
ಬನಹಟ್ಟಿ ಪೊಲೀಸ್ ಠಾಣೆಯ ಪೊಲೀಸರ ಕುಟುಂಬಗಳಿಗೆ ವಸತಿ ಗೃಹ ನಿರ್ಮಾಣವಾಗಿದ್ದವು. ನಂತರದ ದಿನಗಳಲ್ಲಿ ಒಂದೊಂದಾಗಿ ಹಾಳಾಗುತ್ತ ಇದೀಗ ಎಲ್ಲವೂ ಮುಳ್ಳಿನ ಕಂಟಿ, ಕಸದಿಂದ ತುಂಬಿ ಹೋಗಿದೆ. ದಿನಂಪ್ರತಿ ಇಲ್ಲಿಯೇ ತರಕಾರಿ ಮಾರುಕಟ್ಟೆ ನಡೆಯುತ್ತದೆ. ಆಗಮಿಸುವ ಜನರು ಮೂಗು ಮುಚ್ಚಿಕೊಂಡೇ ತರಕಾರಿ ತೆಗೆದುಕೊಳ್ಳಬೇಕಾದ ಪ್ರಸಂಗ ನಡೆಯುತ್ತಿದೆ. 
ಕುಡುಕರ ಅಡ್ಡೆ: ಸಂಜೆಯಾಗುತ್ತಿದ್ದಂತೆ ಕುಡುಕರು ಹಾಗು ಜೂಜಾಟವಾಡುವ ಜನರು ಸೇರುತ್ತಾರೆ. ದಿನಂಪ್ರತಿ ಸುತ್ತಲಿನ ಕುಟುಂಬಗಳಿಗೆ ಇವರ ಜಗಳ ಹಾಗು ಜೂಜಾಟದ ಹಾವಳಿಯಿಂದ ಸುಸ್ತಾಗಿದ್ದಾರೆ. ಪೂರ್ತಿ ಕಸದಿಂದ ಕಲೀಜಾಗಿ ಕ್ರಿಮಿ-ಕೀಟಗಳ ಕಾಟದಿಂದ ಹಾಗು ಚೇಳುಗಳ ಭಯ ಜನರನ್ನು ಕಾಡುತ್ತಿದೆ.
ಕೂಡಲೇ ಈ ಪೊಲೀಸ್ ಇಲಾಖೆಯ ಜಾಗೆಯನ್ನು ಸಂಪೂರ್ಣ ಸ್ವಚ್ಛಗೊಳಿಸುವ ಮೂಲಕ ನೂತನ ಗೃಹಗಳನ್ನು ನಿರ್ಮಿಸಿದ್ದಲ್ಲಿ ಪೊಲೀಸರಿಗೆ ಸಮಸ್ಯೆಯಾಗುತ್ತಿರುವ ವಸತಿಗೆ ಪರಿಹಾರ ಕಾಣುವದರ ಜೊತೆಗೆ ಪ್ರದೇಶವೂ ಸ್ವಚ್ಛಂಧವಾಗುವದು.