`ಆಧಾರ್’ಗಾಗಿ ಜನರ ಅಲೆದಾಟ

*ಆಧಾರ್ ತಿದ್ದುಪಡಿಗೆ ಜನರ ಹರಸಾಹಸ

-ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ,ಅ1:  ಆಧಾರ್ ಕಾರ್ಡ್‍ನಲ್ಲಿರುವ ಲೋಪದೋಷಗಳ ತಿದ್ದುಪಡಿಗಾಗಿ ಅರ್ಜಿ ನೀಡಲು ಜನತೆ ಅಕ್ಷರಶಃ ಪರದಾಡುತ್ತಿದ್ದ್ರೂ ಸಮಸ್ಯೆ ಬಗೆಹರಿಸುವ ಬದಲಾಗಿ ಮತ್ತಷ್ಟು ಜಟಿಲಗೊಳ್ಳುವಲ್ಲಿ ಆಡಳಿತ ವರ್ಗ ಕಾರಣವಾಗಿದೆ.

ಆಧಾರ್ ಕಡ್ಡಾಯವಲ್ಲವೆಂದು ಸರ್ವೋಚ್ಛ ನ್ಯಾಯಾಲಯ ಆದೇಶದ ನಡುವೆಯೂ ವಿವಿಧ ಸರ್ಕಾರಿ ಯೋಜನೆಗಳು, ಇತರೆ ಕಾರ್ಯಗಳಿಗೆ ಆಧಾರ್ ಕಾರ್ಡ್ ಅನ್ನೇ ಆಧಾರ ಮಾಡಿಕೊಂಡಿರುವ ಸರ್ಕಾರದ ಇಲಾಖೆಗಳ ಕ್ರಮಕ್ಕೆ ಆಕ್ರೋಶವೂ ವ್ಯಕ್ತವಾಗಿದೆ.

ಆಧಾರ್‍ಗಳಲ್ಲಿನ ಹೆಸರು, ಜನ್ಮ ದಿನಾಂಕ ಸೇರಿದಂತೆ ಇತರೆ ಮಾಹಿತಿ ತಪ್ಪಿದರೆ, ಅದನ್ನು ತಿದ್ದುಪಡಿ ಮಾಡಿಸಿಕೊಳ್ಳುವ ಸಲುವಾಗಿ ಜನತೆ ಬೆಳಿಗ್ಗೆ 6 ಗಂಟೆಯಿಂದಲೇ ಸ್ಥಳೀಯ ತಾಲೂಕಾಡಳಿತ ಹಾಗು ಬ್ಯಾಂಕ್ ಆಫ್ ಬರೋಡಾ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಕಚೇರಿಯಲ್ಲಿ ಅರ್ಜಿ ಕೊಡುವದು ದಿನಕ್ಕೆ ಕೇವಲ 20 ರಿಂದ 30 ಮಂದಿಗೆ ಮಾತ್ರ. ಉಳಿದವರು ಗಂಟೆಗಟ್ಟಲೇ ನಿಂತಿದ್ದೇ ಬಂತು. ಸಾಕಷ್ಟು ಮಂದಿ ಇರೋ ಬರೋ ಕೆಲಸವನ್ನೆಲ್ಲಾ ಬಿಟ್ಟು ಕೇವಲ ತಿದ್ದುಪಡಿಗಾಗಿಯೇ ದಿನಗಟ್ಟಲೆ ಅಲೆಯುವಂತಾಗಿದೆ.

ಸಮಸ್ಯೆ: ಆಧಾರ್ ಕಾರ್ಡ್‍ನಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಸಲವಾಗಿ ಬನಹಟ್ಟಿಯ ಅಂಚೆ ಕಚೇರಿಯಲ್ಲಿ ಏಳೆಂಟು ತಿಂಗಳಿಂದ ಕಾರ್ಯ ಸ್ಥಗಿತಗೊಂಡಿದ್ದರಿಂದ ಜನರು ಪರದಾಡುವಂತಾಗಿದೆ.

ಆಧಾರ್ ತಿದ್ದುಪಡಿಗೆ ಈಗಷ್ಟೇ ಬ್ಯಾಂಕ್ ಆಫ್ ಬರೋಡಾದಲ್ಲಿ ಕೇಂದ್ರ ತೆರೆಯಲಾಗಿದ್ದು, ಫಲಾನುಭವಿಗಳು ಕೊಂಚ ನಿರಾಳವಾಗುವಲ್ಲಿ ಕಾರಣವಾಗಿದೆ. 

ಕಾಯ್ದಿರಿಸಿದ ದಿನ: ವಿಶೇಷವೆಂದರೆ ಸ್ಥಳೀಯ ತಹಶೀಲ್ದಾರ ಕಚೇರಿ ಹಾಗು ಬ್ಯಾಂಕ್ ಆಫ್ ಬರೋಡಾದಲ್ಲಿ ತಿದ್ದುಪಡಿದಾರರಿಗೆ ಅರ್ಜಿ ಒದಗಿಸುವ ಸಂದರ್ಭ ಅದರ ಮೇಲೆ ಮುಂದಿನ ಆಗಮನದ ದಿನಾಂಕ ಬರೆಯುವ ಮೂಲಕ ಸ್ವಲ್ಪ ಮಟ್ಟಿಗೆ ಜನತೆಗೆ ಅನುಕೂಲ ಬಯಸುತ್ತಿದ್ದರೆ, ತ್ವರಿತವಾಗಿ ಬೇಕಾದ ಜನರು ದಿನಂಪ್ರತಿ ಕಚೇರಿಯಲ್ಲಿ ವಾಗ್ವಾದ ಸಾಮಾನ್ಯವಾಗಿದೆ. ಅಂಚೆ ಇಲಾಖೆಯಲ್ಲಿ ಸಾವಿರಕ್ಕೂ ಅಧಿಕ ತಿದ್ದುಪಡಿದಾರರು ತಮ್ಮ ಸರದಿ ಚೀಟಿ ಪಡೆದು ದಿನಂಪ್ರತಿ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.

ಇದೇ ಕಾರಣಕ್ಕೆ ಕಚೇರಿಗೆ ಪೊಲೀಸ್ ಸಿಬ್ಬಂದಿ ಅನಿವಾರ್ಯವಾಗುವಷ್ಟು ಅಧಾರ್ ತಿದ್ದುಪಡಿದಾರರ ಸಮಸ್ಯೆ ಉಲ್ಬಣಗೊಂಡಿದೆ. ಕೆಲವರಿಗೆ ಡಿಸೆಂಬರ್ ತಿಂಗಳವರೆಗೂ ದಿನಾಂಕ ನಿಗದಿಪಡಿಸಿದ್ದು, ಅಂದಿನ ದಿನವೇ ಆಗಮಿಸುವಂತೆ ಅಧಿಕೃತ ದಿನಾಂಕ ಸೀಲ್ ಹಾಕಿ ಒದಗಿಸುವಂಥ ಅನಿವಾರ್ಯತೆ ಸಿಬ್ಬಂದಿಗಳದ್ದಾಗಿದೆ.