ಊರ ಸ್ವಚ್ಛತೆಗೆ ಟೊಂಕ ಕಟ್ಟಿದ ಮಹಿಳಾ ತಂಡ

-ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ,ಅ1:`ಆರೋಗ್ಯವೇ ಭಾಗ್ಯ’ ಎಂಬ ನಾಣ್ನುಡಿಯೊಂದಿಗೆ ಉತ್ತಮ ಆರೋಗ್ಯಕ್ಕೆ ಉತ್ತಮ ಹಾಗು ಸ್ವಚ್ಛ ಪರಿಸರಕ್ಕಾಗಿ 2014 ಅಕ್ಟೋಬರ್ 2 ರಂದು ಗಾಂಧೀಜಿ ಜನ್ಮ ದಿನಾಚರಣೆಯಂದು `ಸ್ವಚ್ಛ ಭಾರತ ಅಭಿಯಾನ’ ಪ್ರಾರಂಭಿಸಿದರು. ಗಾಂಧೀಜಿ ಹುಟ್ಟಿ 150 ವರ್ಷ ಪೂರ್ಣಗೊಳ್ಳುವ 2019 ಕ್ಕೆ ಈ ಯೋಜನೆ ಗುರಿ ಇಟ್ಟಿಕೊಂಡು ಸಂಪೂರ್ಣ ದೇಶ ಸ್ವಚ್ಛವಾಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿಗೂ ಸರ್ಕಾರ ಕ್ರಮ ಬದ್ಧವಾಗಿತ್ತು.

ಇಲ್ಲೊಂದು ಮಹಿಳಾ ಮಣಿಗಳ ತಂಡ ಮಾತ್ರ ಸತತ ಕಳೆದ 5 ವರ್ಷಗಳಿಂದ ಗಾಂಧೀಜಿ ಕಂಡ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ರಬಕವಿ-ಬನಹಟ್ಟಿ-ಹೊಸೂರ-ರಾಮಪೂರದ ಎಲ್ಲ 31 ವಾರ್ಡ್‍ಗಳಿಗೆ ತೆರಳಿ ಸ್ವಚ್ಛತೆಯ ಅಭಿಯಾನವನ್ನು ಕೇವಲ ಮಾತಿನ ಮೂಲಕ ಹೇಳದೆ ಕ್ರಿಯಾತ್ಮಕವಾಗಿ ಇಂದಿಗೂ ಮುನ್ನಡೆಸಿಕೊಂಡು ಬಂದಿರುವದು ಹೆಮ್ಮೆಯೇ ಸರಿ.

ರಬಕವಿಯ ಡಾ. ಇಂಧುಮತಿ ಯಂಡೋಳಿಯವರ ನೇತೃತ್ವದಲ್ಲಿನ ಏಳೆಂಟು ಜನ ಮಹಿಳಾ ಮಣಿಗಳು ಪ್ರತಿ ರವಿವಾರ ಬೆಳಿಗ್ಗೆ 3-4 ಗಂಟೆಗಳಷ್ಟು ಸಮಯ ಮೀಸಲಿಟ್ಟು, ಸ್ವಚ್ಛತೆಗೆಂದೇ ತಮ್ಮ ಶ್ರಮದಾನ ಮಾಡುತ್ತಿದ್ದಾರೆ.

ಬೆಳಿಗಿನ 6 ಗಂಟೆಯಾಗುತ್ತಿದ್ದಂತೆ ಯಾವ ಪ್ರದೇಶವಾದರೂ ಸರಿ ದಿಢೀರನೆ ಕೈಯಲ್ಲಿ ಪೊರಕೆ ಕಸ ತುಂಬುವ ಡಬ್ಬಿ ಸೇರಿದಂತೆ ಸ್ವಚ್ಛತೆಗೆ ಬೇಕಾಗುವ ಸಾಮಗ್ರಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕಸ ಗುಡಿಸುವದೊಂದೇ ಕಾರ್ಯ. ಇವರನ್ನು ನೋಡಿ ಮೊದಮೊದಲು ಜನತೆ ಹುಬ್ಬೇರಿಸಿದ್ದೂ ಉಂಟು. ಇದ್ಯಾವದಕ್ಕೂ ಕ್ಯಾರೇ ಎನ್ನದೆ ಇಂದಿಗೂ ತಮ್ಮ ಸಮಾಜ ಸೇವೆಯಲ್ಲಿರುವದು ವಿಶೇಷವಾಗಿದ್ದು, ಇವರಿಂದ ಅನೇಕ ಸಂಘಟನೆಗಳಿಗೆ ದಾರಿದೀಪವಾಗಿದ್ದಾರೆ.

ತಾಲೂಕಿನ ಪ್ರತಿಯೊಂದು ಶಾಲೆಗಳಿಗೆ ಸ್ವಯಂಪ್ರೇರಿತವಾಗಿ ತೆರಳಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ಮನೆಯೊಂದಿಗೆ ಸುತ್ತಲಿನ ಪರಿಸರದ ಸ್ವಚ್ಛತೆಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಹಿಳೆಯರಿದ್ದರೂ ಕೆಚ್ಛೆದೆಯಿಂದ ಬಸ್ ನಿಲ್ದಾಣ, ರುದ್ರಭೂಮಿ, ಸರ್ಕಾರಿ ಶಾಲಾ ಮೈದಾನ, ಸಮುದಾಯ ಭವನ, ಬಹುತೇಕ ರಸ್ತೆಗಳು ಸೇರಿದಂತೆ ಎಲ್ಲೆಂದರಲ್ಲಿ ಸ್ವಚ್ಛತೆಯ ಬಗ್ಗೆ ಸದಾ ಜಾಗೃತಿಯಲ್ಲಿರುವದು ವಿಶೇಷ.

ಇಂದಿಗೂ ಹಿರಿಯ ವೈದ್ಯೆ ಡಾ. ಇಂದುಮತಿ ಯಂಡೋಳಿಯವರೊಂದಿಗೆ ಅನುಸೂಯಾ ವಜ್ಜರಮಟ್ಟಿ, ಸುಮಾ ಸಾಬೋಜಿ, ಭಾರತಿ ಸೋಳಂಕಿ, ಹೇಮಾ ವಜ್ಜಮಟ್ಟಿ, ವಿಜಯಲಕ್ಷ್ಮೀ ಡೋಮನಾಳ, ವೈಷ್ಣವಿ ಬಾಗೇವಾಡಿ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡು ಪ್ರತಿ ವಾರ ಒಂದೊಂದು ಪ್ರದೇಶಗಳ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುತ್ತಾರೆ.

`ವೈದ್ಯಕೀಯ ಸೇವೆಯಲ್ಲಿರುವ ನನಗೆ ಬಾಲ್ಯದಿಂದಲೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಆಸಕ್ತಿ, ಅರಿವು ಇತ್ತು. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮಾ ಗಾಂಧಿ ಜಯಂತಿ ದಿನದಂದು `ಸ್ವಚ್ಛ ಭಾರತ ಯೋಜನೆ’ಗೆ ಹೊಸ ರೂಪ ನೀಡಿದ್ದರ ಬೆನ್ನಲ್ಲೆ ಪ್ರಭಾವಿತಳಾಗಿ ಗೆಳತಿಯರೊಂದಿಗೆ ಈ ಕಾರ್ಯದಲ್ಲಿ ಮುನ್ನಡೆಯುತ್ತಿದ್ದೇವೆ.’---ಡಾ. ಇಂಧುಮತಿ ಯಂಡೋಳಿ, ಬಿಎಚ್‍ಎಂಎಸ್, ರಬಕವಿ.