ರಬಕವಿ-ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಅತಿವೃಷ್ಠಿ ನಿಮಿತ್ತ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ 

ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಪರಿಹಾರದ ವ್ಯವಸ್ಥೆ-ಸವದಿ
ರಬಕವಿ-ಬನಹಟ್ಟಿ,ಅ22: ಅತಿವೃಷ್ಠಿಯಿಂದ ಹಾನಿಗೊಳಗಾದ ಮಾಹಿತಿಯನ್ನು ಕ್ರೂಢಿಕರಿಸಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. 
ರಬಕವಿ-ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಅತಿವೃಷ್ಠಿ ನಿಮಿತ್ತ ಯಾವ ರೀತಿ ಸರ್ವೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕರೆಯಲಾಗಿದ್ದ ವಿವಿಧ ಅಧಿಕಾರಿಗಳು, ತಲಾಟಿ, ಪಿಡಿಓ, ಇಂಜನಿಯರಗಳು, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಡವರ ಯಾವುದೇ ಮನೆಗಳು ಉಳಿಯದಂತೆ ಸರ್ವೆ ಕಾರ್ಯವನ್ನು ಮಾಡಿಸಿ ಸರಕಾರಕ್ಕೆ ವರದಿ ಕಳುಹಿಸಲಾಗುವುದು ಎಂದರು.  
ಮಳೆಯಿಂದಾಗಿ ಕ್ಷೇತ್ರಾದ್ಯಂತ ಬಹಳ ದೊಡ್ಡ ಪ್ರಮಾಣದ ರಸ್ತೆಗಳು ಹಾನಿಯಾಗಿವೆ. ಲೋಕೋಪಯೋಗಿ ಇಲಾಖೆ ರಸ್ತೆ, ಜಿಎಲ್‍ಬಿಸಿ ರಸ್ತೆ, ಜಿಲ್ಲಾ ಪಂಚಾಯತ ರಸ್ತೆ ಎಲ್ಲ ರಸ್ತೆಗಳು ಕಿತ್ತು ಹೋಗಿ ಜನ ಸಾಮಾನ್ಯರು ತಿರುಗಾಡದಂತೆ ತಗ್ಗುಗಳು ನಿರ್ಮಾಣ ಆಗಿವೆ. ಅದನ್ನು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುವುದು. ಆಯಾ ಇಲಾಖೆ ಅಧಿಕಾರಿಗಳಿಗೆ ಯಾವ ಯಾವ ರಸ್ತೆಗಳು ಎಷ್ಟು ಹಾನಿಯಾಗಿವೆ ಎಂಬುದರ ಬಗ್ಗೆ ವರದಿ ತಯಾರಿಸಲು ತಿಳಿಸಲಾಗುವುದು. ಒಟ್ಟಾರೆ ತಾಲೂಕಿನಾದ್ಯಂತ ಅತಿ ವೃಷ್ಠಿಯಿಂದ ಎಷ್ಟು ಹಾನಿಯಾಗಿದೆ, ಏನೇನು ಹಾನಿಯಾಗಿದೆ, ಯಾರ್ಯಾರಿಗೆ ತೊಂದರೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ವರದಿಯನ್ನು ತಯಾರಿಸಿ ಸರಕಾರದ ಗಮನಕ್ಕೆ ತಂದು ಸರಕಾರದ ಜೊತೆ ಚರ್ಚಿಸಿ ಹೆಚ್ಚಿನ ಅನುದಾನ ತಂದು ಅತಿವೃಷ್ಠಿಗೆ ಹಾನಿಯಾದ ಮನೆಗಳ ನಿರ್ಮಾಣ, ರಸ್ತೆಗಳನ್ನು ಮಾಡಿಸುವುದು, ಬೆಳೆ ಪರಿಹಾರ ಕೊಡಿಸುವುದನ್ನು ಆದ್ಯತೆಯ ಮೇರೆಗೆ ಮಾಡುತ್ತೇವೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ನಮ್ಮ ಜನಪ್ರತಿನಿಧಿಗಳು ಕೂಡಿಕೊಂಡು ಬಡವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದರು.
ಅತಿವೃಷ್ಠಿ ಸಂದರ್ಭದಲ್ಲಿ  ಪ್ರಾಮಾಣಿಕವಾಗಿ ಸರ್ವೆ ಕಾರ್ಯ ಮಾಡಿ ಬಡವರಾರು ಉಳಿಯಬಾರದು. ದುರುಪಯೋಗ ಪಡಿಸಿಕೊಳ್ಳುವ ಜನರ ಮೇಲೆ ನಿಗಾ ವಹಿಸಿ, ಸ್ಥಳೀಯವಾಗಿ ಪರೀಸಿಲಿಸಿ ಈ ಅತಿವೃಷ್ಠಿಯಲ್ಲಿ ಹಾನಿಗೊಳಗಾದ ಮನೆಗಳ ಸರ್ವೆ ಪ್ರಾಮಾಣಿಕವಾಗಿ ಮಾಡಿ ಅವರಿಗೆ 100ಕ್ಕೆ 100 ರಷ್ಟು ಮನೆ ಕಟ್ಟಿಸಿ ಕೊಡುವ ಕೆಲಸ ಮಾಡಬೇಕೆಂದಿದ್ದೇವೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಸರ್ವೆ ಮಾಡಿದ ನಂತರ ನಾಲ್ಕೈದು ಇಲಾಖೆಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದು ಅವರು ಪುನರ ಪರಿಶೀಲನೆ ನಡೆಸಿ ಯಾವವು ಅರ್ಹವೋ ಅವರಿಗೆ ಮನೆ ಹಾಕಿಕೊಡುವ ಕೆಲಸ ಮಾಡುತ್ತೇವೆ ಎಂದರು. 
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಈಗಾಲೇ ಮಳೆಹಾನಿಯ ಕುರಿತು ನಮ್ಮ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಶೇ. 90 ರಷ್ಟು ವರದಿ ಸಲ್ಲಿಸಿದ್ದು, ಇನ್ನೂ ನಾಲ್ಕೈದು ಹಳಿಗಳ ವರದಿ ಮಾತ್ರ ಬರಬೇಕಿದ್ದು ಅಂದಾಜು 500ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಸರ್ವೆ ಮಾಡಿದ ಲಿಸ್ಟ್‍ನ್ನು ಆಯಾ ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಚ್ಚಲಾಗುವುದು. ಯಾವುದಾರೂ ಸಮಸ್ಯೆ ಬಂದರೆ ನಂತರ ಇನ್ನೊಂದು ತಂಡ ಕಂದಾಯ ನಿರೀಕ್ಷಕರು, ಉಪತಹಶೀಲ್ದಾರ ಮತ್ತು ಗ್ರೇಡ್-2 ತಹಶೀಲ್ದಾರ ನೇತೃತ್ವದ ತಂಡ ಸಮಸ್ಯೆಯಲ್ಲಿರುವ ಮನೆಗಳ ಸರ್ವೆ ಮಾಡುತ್ತಾರೆ. ಇದರ ನಂತರವೂ ಸಮಸ್ಯೆ ಬಂದರೆ ಖುದ್ದಾಗಿ ತಹಶೀಲ್ದಾರ ಮತ್ತು ತಾ. ಪಂ ಅಧಿಕಾರಿ ತಂಡ ಸರ್ವೆ ಕಾರ್ಯ ಪರಿಶೀಲನೆ ನಡೆಸಲಿದೆ. ಒಟ್ಟಾರೆ ಮೂರು ಹಂತದಲ್ಲಿ ಪರಿಶೀಲನೆ ನಡೆಯಲಿದೆ. ಎಲ್ಲ ಬಿದ್ದ ಮನೆಗಳು ಸದ್ಯದ ಮಳೆಗೆ ಬಿದ್ದರಬೇಕು. ಹಳೆ ಬಿದ್ದ ಮನೆಗಳು ಹಾಗೂ ವಾಸ ವಿರಲಾರದ ಮನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸರ್ವೆ ಕಾರ್ಯ ಮಾಡಿ ಎಂದರು. 
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜು ಹಿಪ್ಪರಗಿ, ಉಪತಹಶೀಲ್ದಾರ ಬಸವರಾಜ ಬಿಜ್ಜರಗಿ, ಎಸ್. ಎಲ್. ಕಾಗಿಯವರ, ವೃತ್ತ ಕಂದಾಯ ನೀರಿಕ್ಷಕ  ಬಸವರಾಜ ತಾಳಿಕೋಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.