ರಸ್ತೆಯಲ್ಲಿ ಹೊಂಡವೋ.. ಹೊಂಡದಲ್ಲಿ ರಸ್ತೆಯೋ!
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಅ13: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳೆಲ್ಲ ಹದಗೆಟ್ಟಿವೆ. ಸಂಚಾರ ದುಸ್ತರವಾಗಿದೆ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ.
ರಬಕವಿ-ಬನಹಟ್ಟಿ ನಗರ ಹಾಗು ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಪಟ್ಟಣದೊಳಗಿನ ಎಲ್ಲ ಪ್ರಮುಖ ರಸ್ತೆಗಳೆಲ್ಲ ಹೊಂಡಮಯವಾಗಿವೆ. ಜಗದಾಳ, ನಾವಲಗಿ, ಆಸಂಗಿ ಸೇರಿದಂತೆ ರಸ್ತೆಗಳು ಒಡೆದು ಹಾಳಾಗಿವೆ. ರೈತರು ನಮ್ಮ ನೋವು ಯಾರಿಗೆ ಹೇಳೋಣವೆಂದು ಪರಿತಪಿಸುತ್ತಿದ್ದಾರೆ.
ಈ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಅಥವಾ ನಡೆದುಕೊಂಡು ಒಮ್ಮೆ ಓಡಾಡಿದರೆ, ನಿಮಗೆ ಸ್ನಾನ ಮಾಡಿದ ಅಬುಣವವಾಗುತ್ತದೆ. ಬೈಕ್ ಸವಾರರೇನಾದರೂ ಸ್ವಲ್ಪ ಎಚ್ಚರ ತಪ್ಪಿದರೆ, ನೀರಿನಲ್ಲಿ ಮುಳುಗಿ ಏಳಬೇಕು. ಕಾರು ಅಥವಾ ಆಟೊಗಳ ಚಾಲಕರು ಗ್ಯಾರೇಜ್‍ಗೆ ಹಣ ಸುರಿಯುವದು ಖಚಿತ!
ತಮ್ಮಣ್ಣಪ್ಪ ರಸ್ತೆಯಿಂದ ಮಂಗಳವಾರ ಪೇಟೆ, ಸೋಮವಾರ ಪೇಟೆ, ಭುವನೇಶ್ವರಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಹಿಳಾ ಮಣಿಗಳು ರಸ್ತೆ ನಿರ್ಮಾಣಕ್ಕೆಂದು ಪ್ರತಿಭಟನೆಗಿಳಿದಿದ್ದಾರೆ. ನಗರಸಭೆ ಯಾವ ರೀತಿ ಸವಾಲನ್ನಾಗಿ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕು.

Social Plugin