ರಬಕವಿ-ಬನಹಟ್ಟಿಯಲ್ಲಿ ಹತ್ರಾಸ ಪ್ರಕರಣವನ್ನು ಖಂಡಿಸಿ ಅಂಬೇಡ್ಕರ್ ಸೇನೆ ಉತ್ತರ ಕರ್ನಾಟಕ ಸಮಿತಿ ಮತ್ತು ಅಲ್ಪ ಸಂಖ್ಯಾತ ಘಟಕದ ಸದಸ್ಯರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹತ್ರಾಸ್ ಪ್ರಕರಣ: ಭಾರತ ಬಂದ್ ಕರೆ
ರಬಕವಿ-ಬನಹಟ್ಟಿ,ಅ8: ಉತ್ತರ ಪ್ರದೇಶದ ಹಾಥರಸ್ದಲ್ಲಿ ನಡೆದ ಪ್ರಕರಣದ ಆರೋಪಿಗಳಿಗೆ ಆದಷ್ಟು ಬೇಗನೆ ಶಿಕ್ಷೆ ವಿಧಿಸಬೇಕು. ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರತ ಬಂದ್ಗೆ ಕರೆ ನೀಡಲಾಗುವುದು ಎಂದು ಅಂಬೇಡ್ಕರ್ ಸೇನೆಯ ಉತ್ತರ ಕರ್ನಾಟಕ ಸಮಿತಿಯ ಅಧ್ಯಕ್ಷ ಶಿವಲಿಂಗ ಗೊಂಬಿಗುಡ್ಡ ತಿಳಿಸಿದರು.
ಅವರು ಬುಧವಾರ ಸ್ಥಳೀಯ ಗಾಂಧೀಜಿ ಸರ್ಕಲ್ ಬಳಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಅಲ್ಪ ಸಂಖ್ಯಾತ ಘಟಕದ ಮುಖಂಡ ಮೋಸಿನ್ ಗೋಕಾಕ ಮಾತನಾಡಿ, ನಮಗೆ ಪ್ರಧಾನಿ ಮೋದಿಯವರ ಸರ್ಕಾರದ ಸಂವಿಧಾನ ಬೇಡವಾಗಿದೆ. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ರಕ್ಷಣೆ ಮಾಡಬೇಕಾಗಿದೆ. ಉತ್ತರ ಪ್ರದೇಶ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಪ್ರತಿಭಟನೆ ನಡೆಸಿದ್ದರಿಂದ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು.
ಪ್ರತಿಭಟನಾಕಾರರು ಉಪ ತಹಶೀಲ್ದಾರ್ ಎಸ್.ಎಲ್. ಕಾಗಿಯವರ ಅವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೂರಜ ಕುಡ್ರಾಣಿ, ರಂಜಾನ್ ನಾದಾಫ್, ಮಂಜು ಹಾವಿನಾಳ, ಶಶಿಧರ ಮೀಸೆ, ರಮೇಶ ಕಾಂಬಳೆ, ಇಲಿಯಾಸ್ ಕರೋಶಿ, ನಸೀಮ್ ಮೊಕಾಶಿ, ಮೌಲಾನ್ ಗಫಾರ್, ರಫೀಕ್ ಚಿಮ್ಮಡ, ಕುಮಾರ ಮಾಂಗ, ರಾಖೇಶ ಸಿಂಗೆ, ಮೆಹಬೂಬ್ ಸಂತಿ ಸೇರಿದಂತೆ ಅಲ್ಪ ಸಂಖ್ಯಾತ ಘಟಕ ಮತ್ತು ಅಂಬೇಡ್ಕರ್ ಸೇನೆ ಘಟಕದ ಸದಸ್ಯರು ಇದ್ದರು.

Social Plugin