ಹೆಸ್ಕಾಂ ಕರೆಂಟ್ ಶಾಕ್‍ನಿಂದ ಕಂಗಾಲಾದ ಗ್ರಾಹಕ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಅ8: ಕರೋನಾ ವೈರಸ್ ಭೀತಿಯಲ್ಲಿ ಕೈಯಲ್ಲಿ ಕೆಲಸವಿಲ್ಲದೇ ಉಳಿತಾಯ ಮಾಡಿರುವ ಹಣದಲ್ಲೇ ಜೀವನ ಸಾಗಿಸುವ ಮಧ್ಯದಲ್ಲೇ ಹೆಸ್ಕಾಂ ತನ್ನ ಗ್ರಾಹಕರಿಗೆ ಬಿಲ್ ಶಾಕ್ ನೀಡುತ್ತಿದೆ.
ರಬಕವಿಯ ದಾನಮ್ಮದೇವಿ ದೇವಸ್ಥಾನ ಮುಂಭಾಗದ ಚಂದ್ರಶೇಖರ ಭೂಯ್ಯಾರ ಎಂಬುವವರಿಗೆ ಬರೋಬ್ಬರು 2.91 ಲಕ್ಷ ರೂ.ಗಳ ಕರೆಂಟ್ ಬಿಲ್ ನೀಡಿದ್ದಾರೆ. ಇನ್ನು ವಿದ್ಯುತ್ ಬಿಲ್ ನೋಡಿ ಮನೆ ಮಾಲೀಕರು ಕಂಗಾಲಾಗಿದ್ದಾರೆ.
ಹೆಸ್ಕಾಂ ಅಧಿಕಾರಿಗಳ ಯಡವಟ್ಟಿನಿಂದ 5 ಲೈಟ್, 3 ಫ್ಯಾನ್ ಬಳಕೆ ಮಾಡುವ ಚಂದ್ರಶೇಖರ ಕುಟುಂಬಕ್ಕೆ ಹೆಸ್ಕಾಂ ಇಂತಹ ಆಘಾತ ನೀಡಿರುವ ಬಗ್ಗೆ ಸಹಾಯವಾಣಿಗೆ ಪ್ರಶ್ನಿಸಿದರೆ ಬಿಲ್ ಲೋಪದೋಷವೆಂದು ಹೇಳದರೆ ಕೊಂಚ ನಿರಾಳವಾಗಬಹುದಿತ್ತು. ಅದರ ಬದಲಾಗಿ, ತಾವು ರಬಕವಿ, ಬಾಗಲಕೋಟೆ, ಹುಬ್ಬಳ್ಳಿ ಹೆಸ್ಕಾಂ ಹೀಗೆ ಹಾರಿಕೆ ಉತ್ತರ ಹೇಳುತ್ತ ಗ್ರಾಹಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಲು ಇಲಾಖೆ ಕಾರಣವಾಗುತ್ತಿದೆ.
ಇದರ ಬಗ್ಗೆ ಯಾವದೇ ಪರಿಶೀಲನೆ ನಡೆಸದೆ ಬಿಲ್ ಹಣ ತುಂಬಬೇಕೆ? ಎಷ್ಟು ತುಂಬಬೇಕು? ಈ ಕುರಿತು ಯಾರನ್ನು ಸಂಪರ್ಕಿಸಬೇಕೆಂಬ ಹಲವಾರು ಪ್ರಶ್ನೆಗಳಲ್ಲಿಯೇ ಮನೆಯಲ್ಲಿ ಕುಳಿತಿದ್ದಾರೆ. ಈ ಕುರಿತು ಹೆಸ್ಕಾಂ ಇಂತಹ ಎಡವಟ್ಟುಗಳನ್ನು ನಿಲ್ಲಿಸಿ, ಗ್ರಾಹಕರ ವಿಶ್ವಾಸದೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯವಾಗಿದೆ. ಅಲ್ಲದೆ ಜನತೆ ಇದೀಗ ಹೆಸ್ಕಾಂ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಮೀಟರ್ ಇಲ್ಲದೆ ಮನೆಗೆ ಬಿಲ್: ಎಸ್‍ಎಂಎಸ್ ಹಾಗು ಆನ್‍ಲೈನ್ ಮೂಲಕ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳದ ವ್ಯಕ್ತಿಗಳಿಗೂ ಹೆಸ್ಕಾಂ ಬಿಲ್ ಪಾವತಿಸಬೇಕೆಂದು ಬಾಕಿ ಮೊತ್ತಗಳ ಎಸ್‍ಎಂಎಸ್ ಬರುತ್ತಿವೆ.
ಕೆಲ ವ್ಯಕ್ತಿಗಳು ಹೆಸ್ಕಾಂ ಗ್ರಾಹಕರೇ ಇಲ್ಲದಿದ್ದರೂ ಬಿಲ್ ಹೇಗೆ ಸೃಷ್ಟಿಯಾಗುತ್ತವೆ? ಹೇಗೆಲ್ಲ ಬಿಲ್ ಒದಗಿಸಲಾಗುತ್ತದೆ ಎಂಬ ಸೂಕ್ಷ್ಮವಾದ ಪ್ರಶ್ನೆ ಜನತೆಯದ್ದಾಗಿದೆ.

Social Plugin