ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿರುವ ಬ್ಯಾನರ್, ಫ್ಲೆಕ್ಸ್ ಹಾಗು ಬಂಟಿಂಗ್ಸ್‍ಗಳ ಕಾರ್ಯಾಚರಣೆ ನಡೆಸಿದ ನಗರಸಭೆ ಸಿಬ್ಬಂದಿಗಳು.

ಅನಧಿಕೃತ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ತೆರವು ಕಾರ್ಯಾಚರಣೆ ತೀವ್ರ
ರಬಕವಿ-ಬನಹಟ್ಟಿ,ಅ8: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೇಕ್ಸ್, ಬ್ಯಾನರ್, ಬಂಟಿಂಗ್ಸ್ ಮತ್ತು ಕಟೌಟ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ನಗರಸಭಾ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದ್ದಾರೆ.
ಸಾರ್ವಜನಿಕ ಜಾಗಗಳಲ್ಲಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗು ಕಟೌಟ್‍ಗಳನ್ನು ತೆರವುಗೊಳಿಸುವದರ ಜೊತೆಗೆ, ಅವುಗಳನ್ನು ಅಳವಡಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ದಂಡ ವಿಧಿಸಲು ಹೈಕೋರ್ಟ್ ಆದೇಶಿಸಿರುವ ಹಿನ್ನಲೆಯಲ್ಲಿ ನಗರಸಭೆಯ ಎಲ್ಲ ವಲಯಗಳಲ್ಲಿ ವ್ಯಾಪಕ ಕಾರ್ಯಾಚರಣೆ  ನಡೆಸುವ ಮೂಲಕ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ರಬಕವಿಯ ಮಹಾಲಿಂಗಪೂರ ನಾಕಾ, ಬನಹಟ್ಟಿ ಬಸ್ ನಿಲ್ದಾಣ, ತಮ್ಮಣ್ಣಪ್ಪ ಚಿಕ್ಕೋಡಿ ರಸ್ತೆಯ ವರ್ತುಳ, ಮಂಗಳವಾರ ಪೇಟೆ, ವೈಭವ ಚಿತ್ರಮಂದಿರ, ರಬಕವಿಯ ಶಂಕರಲಿಂಗ ದೇವಸ್ಥಾನ ಮುಂಭಾಗದ ವೃತ್ತ, ಬಸ್ ನಿಲ್ದಾಣ, ವಿದ್ಯಾನಗರ ಹೀಗೆ ಪ್ರಮುಖ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಅನಧಿಕೃತವಾಗಿದ್ದ ಎಲ್ಲ ವಸ್ತುಗಳನ್ನು ನಗರಸಭೆ ಸಿಬ್ಬಂದಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 
`ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‍ಗಳನ್ನು ನಗರಸಭೆ ಪರವಾಣಿಗೆಯಿಂದಲೇ ಪ್ರದರ್ಶಿಸಬೇಕು. ಅನಧಿಕೃತವಾಗಿ ಪ್ರದರ್ಶಿಸುವವರ ವಿರುದ್ಧ ಪ್ರಕರಣ ದಾಖಲಿಸುವದಲ್ಲದೆ, ದಂಡವನ್ನೂ ವಿಧಿಸಲಾಗುತ್ತದೆ’.-----ಶ್ರೀನಿವಾಸ ಜಾಧವ, ಪೌರಾಯುಕ್ತ, ರಬಕವಿ-ಬನಹಟ್ಟಿ.