ನಿರ್ದೇಶಕ ವಿಜಯ್‌ ನಿಧನ
ಕನ್ನಡದ ಯಶಸ್ವೀ ಚಿತ್ರನಿರ್ದೇಶಕರಲ್ಲೊಬ್ಬರಾದ ವಿಜಯ್‌ (84 ವರ್ಷ) ಚೆನ್ನೈನಲ್ಲಿ ಇಂದು ಸಂಜೆ 6 ಗಂಟೆಗೆ ಅಗಲಿದ್ದಾರೆ. ಆಂಧ್ರ ಮೂಲದ ವಿಜಯಾರೆಡ್ಡಿ ಕನ್ನಡದಲ್ಲಿ 'ವಿಜಯ್‌' ಎಂದೇ ಹೆಸರಾಗಿದ್ದವರು. ರೈತ ಕುಟುಂಬದ ಅವರು ಕೆಲಸ ಅರಸುತ್ತಾ ಮದರಾಸಿಗೆ ಹೋಗಿ ಯಶಸ್ವೀ ನಿರ್ದೇಶಕ, ನಿರ್ಮಾಪಕರಾಗಿ ಬೆಳೆದದ್ದೇ ಒಂದು ಸೋಜಿಗ. 'ರಂಗಮಹಲ್ ರಹಸ್ಯ' (1970) ಚಿತ್ರದೊಂದಿಗೆ ಕನ್ನಡಕ್ಕೆ ಬಂದ ಅವರ ಹೆಸರಿನಲ್ಲಿ ಯಶಸ್ವೀ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಶ್ರೀನಿವಾಸ ಕಲ್ಯಾಣ, ಮಯೂರ, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು, ಬಡವರ ಬಂಧು, ತಾಳಿಯ ಭಾಗ್ಯ, ಕೌಬಾಯ್‌ ಕುಳ್ಳ, ನಾನಿನ್ನ ಬಿಡಲಾರೆ, ಆಟೋ ರಾಜ, ದೇವ, ಪರಶುರಾಮ ಸೇರಿದಂತೆ 37 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 16 ಹಿಂದಿ, 12 ತೆಲುಗು ಸಿನಿಮಾಗಳನ್ನು ನಿರ್ದೇಶಿಸಿದ್ದು, ಚಿತ್ರನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ.
 ಅವಿಸ್ಮರಣೀಯ ಕನ್ನಡ ಚಿತ್ರಗಳನ್ನು ತೆರೆಗಿತ್ತ ಖ್ಯಾತ ನಿರ್ದೇಶಕ ವಿಜಯ್ (ವಿಜಯಾ ರೆಡ್ಡಿ )ಅವರು ಕಾಲವಾಗಿದ್ದಾರೆ! 
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ  ತಮ್ಮ ಶ್ರದ್ಧೆಯಿಂದ ಕ್ರಿಯಾಶೀಲತೆಯಿಂದ  ತಲೆಮಾರಿಗೆ ಕಲೆಯ ಸದಭಿರುಚಿಯನ್ನು ಹೆಚ್ಚಿಸಿದ  ನಿರ್ದೇಶಕರು.

.. ಇಳಿಗಾಲದಲ್ಲಿ ಪ್ರಸಿದ್ಧ ಸೀರಿಯಲ್ಗಳನ್ನು ಅವರು ನಿರ್ದೇಶಿಸಿದರು !
ಹತ್ತು ಹನ್ನೆರಡು ವರ್ಷಗಳ ಹಿಂದೆ
 ಶ್ರೀ ವೆಂಕಟೇಶ್ವರ ಮಹಿಮೆ ಎಂಬ ಸೀರಿಯಲ್ ಅನ್ನು ನಿರ್ದೇಶನ ಮಾಡಿದರು. ಅದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಯಿತು .ಆ ಧಾರಾವಾಹಿಯ ಚಿತ್ರೀಕರಣವನ್ನು ಪೂರ್ಣವಾಗಿ ರಾಮೋಜಿ ಫಿಲ್ಮ್ ಸ್ಟುಡಿಯೋದಲ್ಲಿ ಚಿತ್ರಿಸಿದರು .ನಾನು ಮತ್ತು ಹಿರಿಯ ನಟ ಶ್ರೀ ಎ೦. ಎಸ್ ಉಮೇಶ್ ಜೋಡಿಯಾಗಿ ತಿಂಗಳಿಗೆ ಐದು ದಿನದ ಹಾಗೆ, ಒಂದುೂವರೆ ವರ್ಷ ಅವರ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ, ಅವರ ಅನುಭವಗಳನ್ನು ಕೇಳುವ, ಅವರೊಂದಿಗೆ ಮಾತನಾಡುವ, ಅವರೊಂದಿಗೆ ಒಡನಾಡುವ.. ಸಂದರ್ಭ ಸಿಕ್ಕಿದ್ದು ನನ್ನ ಪುಣ್ಯವಿರಬೇಕು!
 ನಾನು ಅವರ ಬಗ್ಗೆ ಅಣ್ಣಾವ್ರ  ಅನೇಕ ಚಿತ್ರಗಳ ಬಗ್ಗೆ  ಮಾತನಾಡುತ್ತಿದ್ದೆ, ಮಾಹಿತಿ ಕೇಳುತ್ತಿದ್ದೆ ! ಅದೊಂದು ಮರೆಯಲಾಗದ ಅನುಭವ!
ಅವರ ವಿದ್ವತ್ತು ಅವರ ವಿನಯ, ಸಜ್ಜನಿಕೆ ಎಲ್ಲಕ್ಕಿಂತ ಹೆಚ್ಚು ಅತಿ ಶಿಸ್ತಿನ ಮನೋಭಾವ! ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಶುಭ್ರ ಬಿಳಿಯ ಬಟ್ಟೆಯಲ್ಲಿ ಕರಾರುವಾಕ್ಕಾಗಿ ಬಂದು ಚಿತ್ರೀಕರಣಕ್ಕೆ ಸಿದ್ಧರಾಗಿ ಎಲ್ಲರನ್ನೂ ಹುಮ್ಮಸ್ಸಿನಿಂದ ಪ್ರೇರೇಪಿಸುತ್ತಿದ್ದ ಬಗೆ ನನಗೆ ಕಣ್ಣಿಗೆ ಕಟ್ಟಿದಂತಿದೆ! ವಿಜಯ್ ಸರ್  ನಮ್ಮೆಲ್ಲರಿಗೂ ಪ್ರೀತಿಪಾತ್ರ ನಿರ್ದೇಶಕರಾಗಿದ್ದರು.  ಅಷ್ಟು ಹಿರಿಯ ನಿರ್ದೇಶಕರಾಗಿದ್ದರೂ  ಅವರು ತಾಳ್ಮೆಯಿಂದ, ನನ್ನೆಲ್ಲ ಕುತೂಹಲದ ಪ್ರಶ್ನೆಗಳಿಗೆ ಪ್ರೀತಿಯಿಂದ ಉತ್ತರಿಸುತ್ತಿದ್ದರು. ಚಿತ್ರೀಕರಣದ ಅವರ ನಡವಳಿಕೆ ನನಗೆ ಒಂದು ತಲೆಮಾರಿನ ಪರಂಪರೆ ಮತ್ತು  ಸ೦ಯಮಯವನ್ನೇ ನೋಡುತ್ತಿದ್ದ ಹಾಗಾಗುತ್ತಿತ್ತು. 
ಇನ್ನು ಮುಂದೆ ಅವರು ನನಗೆ ನೆನಪು ಮಾತ್ರ . 🙏
#ಸ್ವರೂಪ ಸಂದರ್ಶನ