*ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಉಳ್ಳಾಗಡ್ಡಿ..!
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಅ21: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಉಳ್ಳಾಗಡ್ಡಿ ಇಲ್ಲದೆ ದಿನದ ಅಡುಗೆ ಸಿದ್ಧವಾಗುವದು ಕಷ್ಟ. ಪ್ರತಿಯೊಂದು ಅಡುಗೆ ತಯಾರಿಕೆಗೆ ಉಳ್ಳಾಗಡ್ಡಿ ಬೇಕೇಬೇಕು.
ಪೇಟೆಯಿಂದ ತಂದ ಉಳ್ಳಾಗಡ್ಡಿ ಕತ್ತರಿಸುವಾಗ ಗೃಹಿಣಿಯವರ ಕಣ್ಣಲ್ಲಿ ನೀರು ಬರುವದು ಸಾಮಾನ್ಯ. ಆದರೆ ಈಗ ಅದರ ಬೆಲೆ ಕೇಳಿಯೇ ಗ್ರಾಹಕರ ಕಣ್ಣಲ್ಲಿ ಕಣ್ಣೀರು ಬರುವ ದು:ಸ್ಥಿತಿ ಬಂದೊದಗಿದ್ದು ಉಳ್ಳಾಗಡ್ಡಿ ಬೆಲೆ ಗಗನಮುಖಿ ಆಗಿರುವದೇ ಇದಕ್ಕೆ ಕಾರಣವಾಗಿದೆ.
ಕಳೆದ ವಾರವಷ್ಟೇ 20 ರಿಂದ 30 ರೂ. ಇದ್ದ ಕೆಜಿ ಉಳ್ಳಾಗಡ್ಡಿ ಇದೀಗ 80 ರಿಂದ 90 ರೂ. ಮುಟ್ಟಿದೆ. ಗ್ರಾಹಕರು ದರ ಕೇಳಿಯೇ ಹೌಹಾರುವಂತಾಗಿದ್ದು ವಾರಕ್ಕೆ ಎರಡು ಕೆಜಿ ಉಳ್ಳಾಗಡ್ಡಿ ಖರೀದಿಸುತ್ತಿದ್ದ ಜನತೆ 1 ಕೆಜಿಗೆ ತೃಪ್ತರಾಗುತ್ತಿದ್ದಾರೆ.
ದಿನದಿಂದ ದಿನಕ್ಕೆ ಉಳ್ಳಾಗಡ್ಡಿ ಬೆಲೆ ಗಗನಕ್ಕೆ ಜಿಗಿಯುತ್ತಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಈ ಬಾರಿ ಅತ್ಯಧಿಕ ಮಳೆಯ ಪ್ರಮಾಣದಿಂದ ಬೆಳೆದ ಉಳ್ಳಾಗಡ್ಡಿಯೆಲ್ಲ ನಾಶವಾಗಿದ್ದರ ಹಿನ್ನಲೆ ಈ ಪ್ರಮಾಣದ ಬೆಲೆ ಏರಿಕೆ ಕಾರಣವೆನ್ನಲಾಗಿದೆ.
ವಿಶೇಷವಾಗಿ ತಾಲೂಕಿನ ಎಲ್ಲ ಚಹಾದ ಅಂಗಡಿಗಳಲ್ಲಿ ಗಿರಮಿಟ್, ಮಂಡಕ್ಕೀ ಮಾಡುವದು ಸಾಮಾನ್ಯ. ಇದಕ್ಕೆ ಎಲ್ಲ ಕಡೆಯೂ ಉತ್ತಮ ಗ್ರಾಹಕರು ಇದ್ದಾರೆ. ದರ ಹೆಚ್ಚಳ ಕಾರಣ ಇದನ್ನು ಮಾಡುವದನ್ನೇ ಕೈ ಬಿಟ್ಟಿದ್ದಾರೆ.

Social Plugin