ನಾವಲಗಿ ಗ್ರಾಮದಲ್ಲಿ ಭಾರಿ ಮಳೆಗೆ ಬಿದ್ದ ಮನೆಗಳು

ಮನೆಗಳನ್ನು ಕಳೆದುಕೊಂಡ ಕುಟುಂಬಸ್ಥರು ದೇವಸ್ಥಾನದಲ್ಲಿ ವಾಸವಿರುದನ್ನು ಕಂಡು ಅಧಿಕಾರಿಗಳು ದೌಡಾಯಿಸಿರುವದು.

ಬದುಕು ಬಯಲು ಮಾಡಿದ ಮಳೆ

ರಬಕವಿ-ಬನಹಟ್ಟಿ,ಅ15: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮವೊಂದರಲ್ಲಿಯೇ 25 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ.

ತಾಲೂಕಿನಾದ್ಯಂತ ಹಲವಾರು ಮನೆಗಳು ನೆಲಸಮಗೊಂಡಿದ್ದು, ನಾವಲಗಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ವರದಿಯಾಗಿದೆ. ಕೆಲ ಮನೆಗಳು ನೀರಿನ ತೇವದಿಂದ ಕೂಡಿ ಇಡೀ ಮನೆಗಳೆಲ್ಲವೂ ನೀರಿನಿಂದ ಕೂಡಿದ್ದು, ವಾಸಿಸಲು ಬಾರದಂತಾಗಿದೆ. ಕೆಲ ಮನೆಯ ಅಡಿಪಾಯಗಳು ತೋಯ್ದು ಹೋಗಿದ್ದು, ಹಿಂಬದಿ ಗೋಡೆ ಹಾಗು ಮುಂಭಾಗದ ಗೋಡೆಗಳು ನೆಲಕ್ಕುರುಳಿವೆ. 

ಇಡೀ ತಾಲೂಕಿನಾದ್ಯಂತ ವಾಣಿಜ್ಯ ಬೆಳೆಗಳಾದ ಕಬ್ಬು, ಅರಿಷಿಣ ಸೇರಿದಂತೆ ಇತರೆ ಪೈರುಗಳಿಗೆ ಹಾನಿಯಾಗಿದೆ. ಉಳುಮೆ ಮತ್ತು ನಾಟಿ ಕಾರ್ಯಕ್ಕೂ ಮಳೆ ಅಡ್ಡಿಯುಂಟಾಗಿದ್ದು ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆಗೆ ಜನಜೀವನ ತೀವ್ರ ಅಸ್ತವ್ಯವಸ್ಥಗೊಂಡಿದೆ.

ಗುಡಿ ಸೇರಿದ ಕುಟುಂಬಗಳು: ನಾವಲಗಿ ಗ್ರಾಮದಲ್ಲಿ ಕೆಲ ಮನೆಗಳು ಬಿದ್ದ ಪರಿಣಾಮ ಕುಟುಂಬಸ್ಥರು ಸಂಬಂಧಿಕರ ಮನೆ ಸೇರಿದರೆ ಇನ್ನೂ ಕೆಲ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಗುಡಿ ಸೇರಿದ ಘಟನೆ ನಡೆಯಿತು.

ಈ ಸಂದರ್ಭ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗು ಗ್ರಾಮ ಲೆಕ್ಕಾಧಿಕಾರಿ ಸೇರಿ ಬಿದ್ದ ಮನೆಗಳ ಪರಿಶೀಲನೆ ನಡೆಸುತ್ತಿದ್ದಂತೆ ಕುಟುಂಬಗಳಿಗೆ ಧೈರ್ಯ ಹೇಳುವ ಮೂಲಕ ಶಾಲೆಗಳಲ್ಲಿ ಸೌಲಭ್ಯ ಒದಗಿಸಲಾಗಿದ್ದು, ಅಲ್ಲಿಯೇ ಬರಬೇಕೆಂದು ಮನವಿ ಮಾಡುತ್ತಿರುವದು ಸಾಮಾನ್ಯವಾಗಿತ್ತು.

`ನಾವಲಗಿ ಗ್ರಾಮದಲ್ಲಿ ಸುಮಾರು 25 ಕ್ಕೂ ಅಧಿಕ ಮನೆಗಳ ಗೋಡೆಗಳು ಬಿದ್ದಿದ್ದು, ಕೆಲ ಮನೆಗಳು ನೀರಿನಿಂದ ತೋಯ್ದು ಮನೆಗಳಲ್ಲಿ ನೀರಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ವಿಠ್ಠಲ ಕುಗಟಿ, ಗ್ರಾಮ ಲೆಕ್ಕಾಧಿಕಾರಿ.

`ಮನೆಯಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಲ್ಲ ಕುಟುಂಬಗಳಿಗೆ ವ್ಯವಸ್ಥೆ ಕಲ್ಪಿಸಲಾಗುವದು.’ ಎಸ್.ವಿ. ಮಠದ, ಅಭಿವೃದ್ಧಿ ಅಧಿಕಾರಿ, ಗ್ರಾಪಂ ನಾವಲಗಿ.