ಸಿದ್ದು ಸವದಿ

 ಮಲ್ಲಿಕಾರ್ಜುನ ಬಾಣಕಾರ


ಬಿಡಿಸಿಸಿ ಬ್ಯಾಂಕ್ ಚುನಾವಣೆ: ಶಾಸಕ ಸವದಿ, ಬಾಣಕಾರ ಕಣಕ್ಕೆ

ರಬಕವಿ-ಬನಹಟ್ಟಿ,ಅ4: ಬಾಗಲಕೋಟೆ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಫಿಕ್ಸ್ ಆಗಿರುವ ಹಿನ್ನಲೆಯಲ್ಲಿ ಈ ಬಾರಿ ಪಿಕೆಪಿಎಸ್ ವಿಭಾಗಕ್ಕೆ ರಬಕವಿ-ಬನಹಟ್ಟಿ ನೂತನ ತಾಲೂಕಿಗೆ ಪ್ರತ್ಯೇಕ ಸದಸ್ಯ ಸ್ಥಾನವಾಗಿರುವ ಹಿನ್ನಲೆ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಆಕಾಂಕ್ಷಿಗಳು ಯಾರೂ ಸಹಮತ ತೋರದಿರುವ ಕಾರಣ ಕೆಲ ಸಹಕಾರಿ ಸಂಘಗಳ ಒತ್ತಾಯದ ಮೆರೆಗೆ ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ, ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಚುನಾವಣೆ ಅಖಾಡದಲ್ಲಿ ಕಾಣಿಸಿಕೊಂಡಿರುವದು ತೀವ್ರ ಚರ್ಚೆಗೆ ಕಾರಣವಾಗಿದೆ.

ಈಚೆಗೆ ನಗರದ ನಿರೀಕ್ಷಣಾ ಮಂದಿರದಲ್ಲಿ ಬಿಡಿಸಿಸಿ ಬ್ಯಾಂಕ್‍ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಿಭಾಗಕ್ಕೆ ಸಂಬಂಧ ಸಮಾನ ಮನಸ್ಕ ಆಕಾಂಕ್ಷಿಗಳ ಸಭೆಯಲ್ಲಿ ಸ್ಪಷ್ಟ ಚಿತ್ರಣ ದೊರಕುವಲ್ಲಿ ಮಹತ್ವದ್ದಾಗಿತ್ತು. 10 ಜನ ಆಕಾಂಕ್ಷಿದಾರರು ಪಟ್ಟು ಬಿಡದೆ ನನ್ನನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಹಠ ಹಿಡಿಯುತ್ತಿದ್ದಂತೆ ಶಾಸಕರೂ ಆಕಾಂಕ್ಷಿ ಪಟ್ಟಿಯಲ್ಲಿರುವಲ್ಲಿ ಕಾರಣವಾಗಿತ್ತು.

ಈ ಮೊದಲು ಜಮಖಂಡಿ ತಾಲೂಕಿಗೆ ಸಂಬಂಧಿಸಿದಂತೆ 72 ಪಿಕೆಪಿಎಸ್ ಸೊಸೈಟಿಗಳಿದ್ದವು. ಈ ಬಾರಿ ಹೊಸ ತಾಲೂಕಾಗಿರುವ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 35 ಪಿಕೆಪಿಎಸ್ ಸೊಸೈಟಿಗಳು ಇದರಲ್ಲಿ ಮುಧೋಳ ತಾಲೂಕಿನ ಮಹಾಲಿಂಗಪೂರ ಪಟ್ಟಣದ 7 ಪಿಕೆಪಿಎಸ್ ಸೊಸೈಟಿಗಳು ಒಳಗೊಂಡಿವೆ. 35 ಸೊಸೈಟಿಗಳಲ್ಲಿ 26 ಸೊಸೈಟಿಗಳು ಮತದಾನದ ಹಕ್ಕು ಪಡೆದಿದ್ದು, ತಾಲೂಕಿನ ಸೊಸೈಟಿಗಳಲ್ಲಿ ಬಿಜೆಪಿ ಪ್ರಾಬಲ್ಯದಿಂದ ಆಡಳಿತ ಮಂಡಳಿ ಕೂಡಿದವುಗಳಾಗಿದ್ದು, ನಿಂತ ಅಭ್ಯರ್ಥಿ ನಿರಾಯಾಸದ ಗೆಲುವು ಎಂಬ ಲೆಕ್ಕಾಚಾರ ಎಲ್ಲರದ್ದಾಗಿದೆ. 

ಹಿಂದೆಂದೂ ಇರದಂತಹ ಪೈಪೋಟಿ ಈ ಬಾರಿ ಒಕ್ಕರಿಸಿದ್ದು, ಶಾಸಕ ಸಿದ್ದು ಸವದಿ, ಹಾಲಿ ಸದಸ್ಯ ಭೀಮಶಿ ಮಗದುಮ್, ಮಹಾಲಿಂಗಪೂರದ ಬಸನಗೌಡ ಪಾಟೀಲ, ಮಹಾಲಿಂಗ ಸನದಿ, ಢವಳೇಶ್ವರದ ಎಸ್.ಎಂ. ಪಾಟೀಲ, ರಮೇಶ ಕಿತ್ತೂರ, ರಾಮಣ್ಣ ಹಿಡಕಲ್, ಹಣಗಂಡಿಯ ಪ್ರಸನ್ನ ದೇಸಾಯಿ, ಹೊಸೂರಿನ ಸುಭಾಷ ಚೋಳಿ, ಕುಲಹಳ್ಳಿಯ ಎಂ.ಎನ್. ಕೆರೂರ ಆಕಾಂಕ್ಷಿಗಳಾಗಿದ್ದು, ಈಗಾಗಲೇ ನಡೆಯುತ್ತಿರುವ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದ ಸಭೆಗಳು ವಿಫಲಗೊಂಡಿದ್ದವು. ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಒಂದು ತಲೆನೋವಾಗುವಲ್ಲಿ ಕಾರಣವಾಗಿತ್ತು. ಕೊನೆಗೆ ಶಾಸಕ ಸಿದ್ದು ಸವದಿ ಕಣಕ್ಕಿಳಿದಿರುವದು ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದೆ.

ಬಾಣಕಾರ ಕಣಕ್ಕೆ: ನೇಕಾರ ವಿಭಾಗದಿಂದ ಬಿಜೆಪಿ ಬೆಂಬಲಿತವಾಗಿ ಜವಳಿ ಉದ್ಯಮಿ ಬನಹಟ್ಟಿಯ ಮಲ್ಲಿಕಾರ್ಜುನ ಬಾಣಕಾರ ಕಣಕ್ಕಿಳಿದಿದ್ದಾರೆ.