ಬನಹಟ್ಟಿಯಲ್ಲಿ ಬಿಜೆಪಿ ಮುಖಂಡರಿಂದ ನಡೆದ ಸಭೆಯಲ್ಲಿ ಡಿ.ಆರ್. ಪಾಟೀಲ ಮಾತನಾಡಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಶಿಸ್ತು ಕ್ರಮ
*ಶಾಸಕರನ್ನು ಅಭ್ಯರ್ಥಿ ಮಾಡಿದ್ದು ಪಕ್ಷ
ರಬಕವಿ-ಬನಹಟ್ಟಿ,ಅ18:ಸಹಕಾರಿ ಬ್ಯಾಂಕ್ ಚುನಾವಣೆಗೆ ತೇರದಾಳ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಅಮೂಲಾಗ್ರ ಬದಲಾವಣೆಯ ಸಂಕೇತ ಬಿಂಬಿಸುವಲ್ಲಿ ಕಾರಣವಾಗಿದ್ದು, ಬಿಜೆಪಿಯಲ್ಲಿನ ಬಂಡಾಯ ಭುಗಿಲೇಳುತ್ತಿದೆ.
ಮೂರು ಬಾರಿ ಬಿಜೆಪಿ ಪಕ್ಷದಿಂದ ತಾಲೂಕಿನ ಪಿಕೆಪಿಎಸ್ ವಿಭಾಗದಿಂದ ಅವಕಾಶ ಕಲ್ಪಿಸುವ ಮೂಲಕ ಹಿರಿಯ ಧುರೀಣ ಭೀಮಶಿ ಮಗದುಮ್ ಅವರನ್ನು ಬೆಳೆಸುವಲ್ಲಿ ಪಕ್ಷದ ಕಾರ್ಯಕರ್ತರು ಕಾರಣರಾಗಿದ್ದಾರೆ. ಈ ಬಾರಿ ತೇರದಾಳ ಅಥವಾ ಮಹಾಲಿಂಗಪೂರ ಭಾಗದಿಂದ ಅಭ್ಯರ್ಥಿಯನ್ನು ಬಿಡಿಸಿಸಿ ಬ್ಯಾಂಕ್‍ಗೆ ಅಭ್ಯರ್ಥಿಯನ್ನಾಗಿಸಬೇಕೆಂದಿತ್ತು. ಕೊನೆಯ ಕ್ಷಣದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಪಕ್ಷದ ಎಲ್ಲ ಹಿರಿಯರ, 9 ಜನ ಆಕಾಂಕ್ಷಿದಾರರ ಹಾಗು 23 ಪಿಕೆಪಿಎಸ್ ಸೊಸೈಟಿಗಳ ಅಭಿಪ್ರಾಯ ಪಡೆದುಕೊಂಡು ಅಭ್ಯರ್ಥಿ ಆಯ್ಕೆಯಲ್ಲಿ ಯಾವದೇ ಒಮ್ಮತ ಬಾರದ ಕಾರಣ ಎಲ್ಲರೂ ಸೇರಿ ಶಾಸಕ ಸಿದ್ದು ಸವದಿಯವರನ್ನು ಆಯ್ಕೆಮಾಡಬೇಕಾಯಿತು. ಇದೆಲ್ಲವೂ ಆಕಾಂಕ್ಷಿಯಾದ ಭೀಮಶಿ ಮಗದುಮ್ ಅವರಿಗೂ ಅರಿತ ವಿಷಯವಾಗಿದ್ದು, ಅವರೂ ಸಹ ಅವರನ್ನೇ ಕಣಕ್ಕಿಳಿಸಿ ಎಂದು ಹೇಳಿ, ಈಗ ಅಭ್ಯರ್ಥಿಯಾಗಿ ಸ್ಪರ್ಧಿಸುವದಾಗಿ ಹೇಳುತ್ತಿರುವದು ತರವಲ್ಲವೆಂದು ರಬಕವಿ-ಬನಹಟ್ಟಿ ಬ್ಲಾಕ್ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಶಾಸಕರೇ ಸ್ವಯಂಪ್ರೇರಿತವಾಗಿ ಸ್ಪರ್ಧೆಗಿಳಿದಿಲ್ಲ. ಪಕ್ಷದ ಸರ್ವ ಸಮ್ಮತದಿಂದ ಒತ್ತಾಯಪೂರ್ವಕವಾಗಿ ಕಣಕ್ಕಿಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವದು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವದೆಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಎಲ್ಲರ ಅಭಿಪ್ರಾಯದಂತೆ ತಾಲೂಕಿನ 26 ಪಿಕೆಪಿಎಸ್ ಸೊಸೈಟಿಗಳ ಪೈಕಿ 23 ಸೊಸೈಟಿಗಳು ಬಿಜೆಪಿ ಬೆಂಬಲಿತವಾಗಿವೆ. ಅವರೆಲ್ಲರ ಸಹಮತದೊಂದಿಗೆ ಅಲ್ಲದೆ `ಪ್ರತಿನಿಧಿ’(ಡೆಲಿಗೇಟ್ಸ್)ಗಳ ಪತ್ರಗಳನ್ನೂ ಸಹಿತ ಸ್ವಯಂಪ್ರೇರಿತವಾಗಿ ಪಕ್ಷದ ಹಿರಿಯರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಹೀಗಿದ್ದಾಗ, ವಿನಾಕಾರಣ ಶಾಸಕರ ಮೇಲೆ ಗೂಬೆ ಕೂಡ್ರಿಸುವ ತಂತ್ರದಲ್ಲಿ ತೊಡಗಿರುವ ಮಗದುಮ್‍ರ ನಡೆ ಸರಿಯಲ್ಲವೆಂದರು.
ಶಾಸಕ ಸಿದ್ದು ಸವದಿ ಹಲವು ದಿನಗಳ ಹಿಂದೆಯೇ ತಾಲೂಕಿನ ಹೊಸೂರ ಪಿಕೆಪಿಎಸ್ ಸೊಸೈಟಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಯಮ ಹಾಗು ಕ್ರಮ ಬದ್ಧವಾಗಿಯೇ ನಿರ್ದೇಶಕರಾಗಿ ಇದೀಗ ಚುನಾವಣೆಯ ಅಭ್ಯರ್ಥಿಯಾಗಿ ಘೋಷಣೆಗೊಂಡಿದ್ದಾರೆಂದು ಹಿಟ್ಟಿನಮಠ ಸ್ಪಷ್ಟಪಡಿಸಿದರು.
ಇದೇ ಸಂದರ್ಭ ತಾಲೂಕಿನ ಬಿಜೆಪಿ ಮುಖಂಡರು ಹಾಗು ಆಕಾಂಕ್ಷಿಗಳಾಗಿದ್ದ ಡಿ.ಆರ್. ಪಾಟೀಲ, ಬಸನಗೌಡ ಪಾಟೀಲ, ಪ್ರಸನ್ನಕುಮಾರ ದೇಸಾಯಿ, ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ಮಹಾಲಿಂಗಪ್ಪ ಕುಳ್ಳೋಳ್ಳಿ, ಬಸವರಾಜ ಗೋಪಾಳೆ, ರಾಜು ಅಂಬಲಿ, ಲಕ್ಕಪ್ಪ ಪಾಟೀಲ ಮಹಾನಿಂಗ ಸನದಿ, ಈಶ್ವರ ಸೋನಾರ, ಆನಂದ ಕಂಪು ಸೇರಿದಂತೆ ಅನೇಕರಿದ್ದರು.