ರಬಕವಿಯ ಶಂಕರಲಿಂಗ ದೇವಸ್ಥಾನ ಮುಂಭಾಗ ಹತ್ರಾಸ್ ಅತ್ಯಾಚಾರ ಖಂಡಿಸಿ ಕಾಂಗ್ರೆಸ್‍ನಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
ಬಿಜೆಪಿಯಿಂದ ಸಂವಿಧಾನ ಕಗ್ಗೊಲೆ: ಸರ್ಕಾರದ ಕೈಗೊಂಬೆಯಾದ ಪೊಲೀಸರು
ಹತ್ರಾಸ್ ಅತ್ಯಾಚಾರ ಖಂಡಿಸಿ ಕಾಂಗ್ರೆಸ್‍ನಿಂದ ಪ್ರತಿಭಟನೆ
ರಬಕವಿ-ಬನಹಟ್ಟಿ,ಅ3: ಉತ್ತರ ಪ್ರದೇಶದ ಹತ್ರಾಸ್ 19 ವರ್ಷದ ಮನೀಷಾ ವಾಲ್ಮೀಕಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ರಬಕವಿಯಲ್ಲಿ ಕಾಂಗ್ರೆಸ್‍ನಿಂದ ಪ್ರತಿಭಟನೆ ನಡೆಯಿತು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಮಹಿಳಾ ಪ್ರಧಾನ ರಾಷ್ಟ್ರವಾಗಿರುವ ಭಾರತಾಂಬೆಯಲ್ಲಿ ಮಹಿಳೆ ಇನ್ನೂ ಭಯದಲ್ಲಿಯೇ ಬದುಕಬೇಕಾಗಿದೆ. ದಲಿತ ಮಹಿಳೆ ಎಂಬುದಷ್ಟೇ ಅಲ್ಲ ಮಹಿಳೆಗೆ ಸ್ಥಾನ-ಮಾನ ಒದಗಿಸದ ನೀಚ ಕೃತ್ಯ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ. ಅಮಾಯಕವಾಗಿ ವಿಕೃತವಾಗಿ ಒಂದು ಹೆಣ್ಣನ್ನು ಬಳಸಿ ಜೀವ ತೆಗೆದು ವಿಘ್ನ ಸಂತೋಷಿಗಳಾಗಿರುವ ಆರೋಪಿಗಳಿಗೆ ಶಿಕ್ಷೆ ನೀಡಲು ಕೇಂದ್ರದ ಅಥವಾ ಪ್ರಧಾನಿ ಅನುಮತಿ ಬೇಕೆ? ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವಮಾನಕಾರಿ ಹೇಳಿಕೆ ನೀಡಿ ಕೊಲೆಗಡುಕರ ಬೆಂಬಲಕ್ಕೆ ನಿಂತಿರುವದು ಸಂಸ್ಕ್ರತಿಗೆ ಧಕ್ಕೆ ತರುವಂಥದ್ದು ಎಂದರು.
ಪ್ರಕರಣ ನಡೆದ ದಿನದಂದೇ ಆರೋಪಿಗಳನ್ನು ಬಂಧಿಸಿ ತನಿಖೆಗೆ ಆದೇಶ ಮಾಡಬೇಕಿದ್ದ ಮುಖ್ಯಮಂತ್ರಿ ನಿಸ್ಸಹಾಯಕತೆಯ ಧೋರಣೆ ಸಂವಿಧಾನದ ಕಗ್ಗೊಲೆಗೆ ಕಾರಣವಾಗಿದೆ. ಈ ಸ್ಥಾನದಲ್ಲಿ ಮುಂದುವರೆಯಲು ಕಿಂಚಿತ್ತೂ ಯೋಗ್ಯರಲ್ಲವೆಂದ ಯೋಗಿ ವಿರುದ್ಧ ಮಾಜಿ ಸಚಿವೆ ಕಿಡಿಕಾರಿದರು.
ಪಕ್ಷಾತೀತವಾಗಿ ವಿರೋಧಿಸಿ: ಇಂತಹ ಪ್ರಕರಣ ದೇಶಕ್ಕೆ ಮಾರಕವಾಗುವದರ ಜೊತೆಗೆ ಮಹಿಳೆ ಎಷ್ಟು ಸುರಕ್ಷಿತವೆಂಬ ಆತಂಕ ಮನೆ ಮಾಡಿದೆ. ಈ ಪ್ರಕರಣವನ್ನು ಪಕ್ಷಾತೀತವಾಗಿ ಖಂಡಿಸುವದ ಮಾನವೀಯ ಧರ್ಮ. ಸರ್ಕಾರ ಈ ಪ್ರಕರಣವನ್ನು ಖಾಕಿ ಕೈವಶಪಡಿಸಿಕೊಂಡು ಕಾರ್ಯಾಂಗ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಹತ್ಯೆ ಮಾಡಿದವರನ್ನು ತಕ್ಷಣವೇ ಗಲ್ಲಿಗೇರಿಸುವ ತಾಕತ್ತು ಸರ್ಕಾರಕ್ಕೆ ಇದೆಯೇ? ಎಂದು ಪ್ರಶ್ನಿಸಿದರು.
ಈ ಪ್ರಕರಣಕ್ಕೆ ಸಂಬಂಧ ಸಾಕ್ಷಿ ನಾಶಪಡಿಸುವ ಹುನ್ನಾರ ನಡೆಯುತ್ತಿದೆ. ಆಡಳಿತದಲ್ಲಿರುವವರಿಗೆ ಕೈ, ಕಣ್ಣು, ಬಾಯಿ ಯಾವದೂ ಇಲ್ಲ. ಕೇವಲ ಗೂಂಡಾಗಿರಿ ವರ್ತನೆಯಿಂದ ದೇಶವನ್ನು ನಾಶ ಮಾಡುವ ತಂತ್ರಗಾರಿಕೆ ಬಿಜೆಪಿಯದ್ದು ಎಂದು ಉಮಾಶ್ರೀ ಕಿಡಿಕಾರಿದರು.
ಸಿಬಿಐಗೆ ಒಪ್ಪಿಸಿ: ಹತ್ರಾಸ್ ಪ್ರಕರಣವನ್ನು ಎಸ್‍ಐಟಿಗೆ ನೀಡಿದ್ದು ಸರಿಯಲ್ಲ. ಸಿಬಿಐಗೆ ನೀಡುವ ಮೂಲಕ ಪ್ರಾಮಾಣಿಕ ತನಿಖೆ ನಡೆಯಬೇಕೆಂದು ಉಮಾಶ್ರೀ ಹೇಳಿದರು.
ಬಿಜೆಪಿಯು ದೇಶದಲ್ಲಿ ಕೇವಲ ಕೋಮವಾದದಿಂದಲೇ ಸರ್ಕಾರ ಮುನ್ನಡೆಸುತ್ತ ಬರುತ್ತಿದೆ. ಯಾವದೇ ಭದ್ರತೆ, ಮರ್ಯಾದೆ ಇಲ್ಲದ ಪಕ್ಷವಾಗಿದೆ ಎಂದು ಕಾಂಗ್ರೆಸ್ ಎಸ್‍ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಹೇಳಿದರು.
56 ಇಂಚು ಎದೆಗಾರಿಕೆಯಿಂದ ತೋರಿಸುತ್ತಿರುವದು ಕೇವಲ ಇಂತಹ ಪ್ರಕರಣಗಳನ್ನೇ. ಇಂತಹ ನೀಚ ಕೃತ್ಯವನ್ನು ಕಾಂಗ್ರೆಸ್ ಎಂದಿಗೂ ಸಹಿಸಲ್ಲ. ದಲಿತರಿಗೆ ಅನ್ಯಾಯವಾಗುತ್ತಿರುವದು ಇಂದು ನಿನ್ನೆಯದಲ್ಲ ಬಿಜೆಪಿ ಅವಧಿಯೊಳಗಿನ ಆಡಳಿತದಲ್ಲಿ ನಿರಂತರ ಶೋಷಣೆ ನಡೆಯುತ್ತಿದೆ. ನಿಜವಾಗಿಯೂ ಪ್ರಧಾನಿಯವರಿಗೆ ಎದೆಗಾರಿಕೆಯಿದ್ದರೆ, ದೇಶದ ಜನತೆಯ ಬದಲಾಗಿ ಚೀನಾ ಹಾಗು ಪಾಕಿಸ್ತಾನ ದೇಶಗಳ ದೇಶ ವಿರೋಧಿಗಳ ಮೇಲೆ ತೋರಿಸಲಿ, ಬದಲಾಗಿ ಅಮಾಯಕರ ಅದರಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ಇಂತಹ ಕೃತ್ಯಗಳಿಂದಲ್ಲವೆಂದು ಸಂಗಪ್ಪ ಕುಂದಗೋಳ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸ್ ನಿಲ್ದಾಣದಿಂದ ಶಂಕರಲಿಂಗ ದೇವಸ್ಥಾನವರೆಗೆ ಪ್ರತಿಭಟನಾ ರ್ಯಾಲಿ ನಡೆಸಿತು. ಇದೇ ಸಂದರ್ಭ ದಲಿತ ಸಂಘರ್ಷ ಸಮಿತಿಯು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿತ್ತು.
ಅಶೋಕ ಗಸ್ತಿ, ಬಸವರಾಜ ಕೊಕಟನೂರ, ನಶೀಮ ಮೊಕಾಶಿ, ರಾಜು ಬಾರಕೋಲ, ಅರವಿಂದ ಮನ್ನಿಕೇರಿ, ಬಸವರಾಜ ಗುಡ್ಡೋಡಗಿ, ದಾನಪ್ಪ ಹುಲಜತ್ತಿ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ಶಿವಪ್ಪ ಖವಾಸಿ, ಶ್ರೀಶೈಲ ಮೇಣಿ, ಹಣಮಂತ ಬರಗಾಲ, ಶೇಖರ ಸಿಕ್ಕಲಗಾರ, ಯಮನಪ್ಪ ದೊಡಮನಿ, ಉಸ್ಮಾನಸಾಬ ಲೆಂಗ್ರೆ, ಶೆಟ್ಟೆಪ್ಪ ಕಾಮಶೇಟ್ಟಿ, ಮಾಳಪ್ಪ ಹಿಪ್ಪರಗಿ, ಮಾಳು ಹಿಪ್ಪರಗಿ, ಹಾರುನ ಬೇವೂರ, ರಾಹುಲ್ ಕಲಾಲ, ಶಾಂತಾ ಹಾದಿಮನಿ, ನೀಲಾ ದೊಡಮನಿ, ಮಹಾನಂದಾ ದೊಡಮನಿ, ಭರಮು ತುಂಗಳ ಸೇರಿದಂತೆ ಅನೇಕರಿದ್ದರು.
Social Plugin