ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಅರ್ಪಿಸಿದ ಸಂದರ್ಭ.
ಸರ್ಕಾರದ ಬೆದರಿಕೆಗೆ ಹೆದರೋಲ್ಲ
*ಮುಂದುವರೆದ ಹೊರ ಗುತ್ತಿಗೆ ನೌಕರರ ಮುಷ್ಕರ
*ತಹಶೀಲ್ದಾರ ಕಚೇರಿ ಬಳಿ ಧರಣಿ
ರಬಕವಿ-ಬನಹಟ್ಟಿ,ಅ3: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕೆಲಸಕ್ಕೆ ಗೈರಾಗಿ ನಡೆಸುತ್ತಿರುವ ಮುಷ್ಕರ 11ನೇ ದಿನವಾದ ಶನಿವಾರವೂ ಮುಂದುವರೆಯಿತು.
ಇಂದು ನಗರದ ಕಾಡಸಿದ್ಧೇಶ್ವರ ದೇವಸ್ಥಾನದಿಂದ ಸುಮಾರು 50 ಕ್ಕೂ ಅಧಿಕ ಹೊರ ಗುತ್ತಿಗೆ ನೌಕರರಿಂದ ಪ್ರತಿಭಟನಾ ರ್ಯಾಲಿಯು ತಹಶೀಲ್ದಾರ ಕಚೇರಿವರೆಗೆ ನಡೆಯಿತು. ನಂತರ ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಮನವಿ ಅರ್ಪಿಸಿದ ನಂತರ ಕಚೇರಿ ಬಳಿ ಧರಣಿ ನಡೆಸಿದ ಪ್ರಸಂಗವೂ ಜರುಗಿತು.
ಇದೇ ಸಂದರ್ಭ ಸರ್ಕಾರವು ಲಿಖಿತವಾಗಿ ಹೇಳಿಕೆ ನೀಡುತ್ತ ಗುತ್ತಿಗೆದಾರ ನೌಕರರಿಗೆ ಬೆದರಿಕೆಯೊಡ್ಡುತ್ತಿದೆ. ಇದ್ಯಾವದಕ್ಕೂ ಮಣೆ ಹಾಕುವ ಪ್ರಶ್ನೆಯೇ ಇಲ್ಲ. ನಮ್ಮ ಸಂಪೂರ್ಣ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವದಿಲ್ಲವೆಂದು ನರಸಿಂಹ ಗಲಗಲಿ ಹೇಳಿದರು.
ಸಿಬ್ಬಂದಿ ಕೆಲಸಕ್ಕೆ ಹಾಜರಾಗದಿರುವದರಿಂದ ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಯ ಮೇಲೆ ಪರಿಣಾಮ ಬೀರಿದೆ.
`ಖಾಯಂ ನೌಕರರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತೇವೆ. ಆದರೆ ನಮಗೆ ಅವರಷ್ಟು ವೇತನ, ಸೇವಾ ಭದ್ರತೆ ಸಿಗುವದಿಲ್ಲ. ಹೇಳದೆ ಕೇಳದೆ ಕೆಲಸದಿಂದ ತೆಗೆದು ಹಾಕುತ್ತಾರೆ. ಇದರ ಜೊತೆಗೆ ಗುತ್ತಿಗೆದಾರರು ಕೂಡ ನಮಗೆ ತೊಂದರೆ ಕೊಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇವೆ ಹಾಗಿದ್ದರೂ ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲವೆಂದು ಹೊರಗುತ್ತಿಗೆ ನೌಕರರೊಬ್ಬರು `ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದರು.
ಸಿಬ್ಬಂದಿ ಕೊರತೆ: ಗುತ್ತಿಗೆ ನೌಕರರು ಕೆಲಸಕ್ಕೆ ಬಾರದಿರುವದರಿಂದ ರಬಕವಿ-ಬನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಜನರಿಗೆ ತೊಂದರೆಯಾಗುದ್ದು, ಹೊರ ರೋಗಿಗಳು ಪರದಾಡುವಂತಾಗಿದೆ.
Social Plugin