ತೇರದಾಳ ಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿದ್ದಿರುವ ಮನೆಗಳನ್ನು ಪರಿಶೀಲನೆ ಮಾಡುತ್ತಿರುವ ಕಂದಾಯ ಅಧಿಕಾರಿಗಳು.

ತೇರದಾಳ : ಪಟ್ಟಣದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ 20ಕ್ಕಿಂತಲೂ ಹೆಚ್ಚು ಮನೆಗಳು ಬಿದ್ದಿವೆ ಎಂದು ಗ್ರಾಮಲೆಕ್ಕಾಧಿಕಾರಿ ಪಿ.ಆರ್.ಮಠಪತಿ ತಿಳಿಸಿದ್ದಾರೆ.

  ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣದಲ್ಲಿ ಕೆಲವು ಮನೆಗಳು ಮೇಲ್ಮುದ್ದಿ ಮನೆಗಳಿದ್ದು, ಅವುಗಳು ಸುರಿಯುತ್ತಿರುವು ಭಾರಿ ಮಳೆಗೆ ಮನೆಗಳು ನೀರು ಹಿಡಿದು ಮನೆಗಳ ಮೇಲಿರುವ ಮಣ್ಣು ನೆನೆದು ಕೆಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಕೆಲವು ಮನೆಗಳ ಮೇಲ್ಚಾವಣಿ ಬಿದ್ದಿವೆ. ಆದರೆ ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ. ಪಟ್ಟಣದ ಕಲ್ಲಟ್ಟಿ ಗಲ್ಲಿ, ಕಾಲತಿಪ್ಪಿ ರಸ್ತೆಯಲ್ಲಿರುವ ಹಾಗೂ ಹಳೇಪೇಠ ಭಾಗ ಮತ್ತು ಕೆಇಬಿ ರಸ್ತೆ ಸೇರಿದಂತೆ ಪಟ್ಟಣದಲ್ಲಿ 20ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಆ ಮನೆಯಲ್ಲಿರುವ ಜನರು ಸಂಭಂಧಿಕರ ಮನೆಗಳು ಹಾಗೂ ಬೇರೆ ಬೇರೆ ಮನೆಗಳಲ್ಲಿ ಆಶ್ರಯ ಪಡೆದರೆ ಇನ್ನೂ ಕೆಲವರು ಅದೇ ಮನೆಗಳಲ್ಲಿ ಆಶ್ರಯ ಪಡೆದು ಜೀವನ ಸಾಗಿಸುತ್ತಿದ್ದಾರೆ. 

   ಗ್ರಾಮಲೆಕ್ಕಾಧಿಕಾರಿ ಪಿ.ಆರ್.ಮಠಪತಿ, ಪುರಸಭೆ ಜೆಇ ಎಸ್.ಬಿ.ಮಾತಾಳೆ, ಮಹಾದೇವ ಯಲ್ಲಟ್ಟಿ ಸೇರಿದಂತೆ ಪುರಸಭೆಯ ಸಿಬ್ಬಂದಿಯವರು ಬಿದ್ದಿರುವ ಮನೆಗಳನ್ನು ಸರ್ವೆ ಮಾಡುತ್ತಿದ್ದಾರೆ. ಬಿದ್ದಿರುವ ಮನೆಗಳಿಗೆ ಸರಕಾರದಿಂದ ಸಹಾಯ ಕೊಡಿಸುವ ಕಾರ್ಯ ಮಾಡುತ್ತಿರುವುದಾಗಿ ಗ್ರಾಮಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ.

  ಭಾರಿ ಮಳೆಯಿಂದಾಗಿ ರೈತರ ಜಮೀನುಗಳಲ್ಲಿ ನೀರು ನಿಂತು ಬೆಳೆಗಳು ಕೈಗೆ ಬಾರದಂತಾಗಿದೆ. ಉಳುಮೆ ಹಾಗೂ ನಾಟಿ ಕೃಷಿ ಕಾರ್ಯಗಳಿಗೆ ಮಳೆಯು ಅಡ್ಡಿ ಮಾಡಿದೆ. ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ.