ಭಾರಿ ಮಳೆಗೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ನೂರಾರು ಎಕರೆ ಎಲೆಬಳ್ಳಿ ಹಾನಿಗೊಳಗಾಗಿರುವದು.
ಭಾರಿ ಮಳೆಗೆ 700 ಎಕರೆಯಷ್ಟು ಎಲೆಬಳ್ಳಿ ಹಾನಿ
ರಬಕವಿ-ಬನಹಟ್ಟಿ,ಅ19: `ಹೋದ ವರ್ಷ ಸಾವಿರಾರು ರೂ. ಖರ್ಚು ಮಾಡಿ ಕಷ್ಟಪಟ್ಟು ಎಲೆ ಬಳ್ಳಿ ಹಾಕಿದೆ. ಮಳೆಗೆ ಬೇರು ಎಬ್ಬಿಕೊಂಡು ಹ್ಯಾಂ ಬಾಗಿ ಬಿದ್ದಾವ್ ನೋಡ್ರಿ’.. ಎಂದು ರಬಕವಿ-ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರಮೇಶ ಕಬಾಡಗಿ ಸೇರಿದಂತೆ ಹಲವಾರು ತೋಟಗಳ ರೈತರು ಗೋಳಾಡಿ ಕಣ್ಣೀರು ಹಾಕುತ್ತಿದ್ದರು.
ಈ ಭಾಗದಲ್ಲಿ ರೈತರು ಹೆಚ್ಚಾಗಿ ಅನಾದಿ ಕಾಲದಿಂದಲೂ ಎಲೆಬಳ್ಳಿ ಬೇಸಾಯವನ್ನೇ ಮುಖ್ಯ ಬೇಸವನ್ನಾಗಿ ಮಾಡಿಕೊಂಡಿದ್ದಾರೆ. ಸಂಪೂರ್ಣ ಸಾವಯವ ಕೃಷಿಯಿಂದ ಮಾಡುವ ಈ ಬೇಸಾಯಕ್ಕೆ `ಮೂರು ವರ್ಷ ದುಡಿದ್ರ ನೂರು ವರ್ಷದ ತನ್ಕ ಕಾಪಾಡತೈತಿ’ ಎಂಬ ರೈತರ ನಾಣ್ಣುಡಿ ಇದೆ. ಆದರೆ ಕಳೆದ ವಾರ ಭಾರಿ ಪ್ರಮಾಣದಲ್ಲಿ ಸುರಿದ ಬಿರುಮಳೆಗೆ ಎಳೆ ಸ್ಥಿತಿಯಲ್ಲಿದ್ದ ಎಲೆಬಳ್ಳಿ ಬೆಳೆ ಬೇರುಗಳನ್ನು ಹೊರಗೆ ಹಾಕಿಕೊಂಡು ಬಾಗಿ ಬಕ್ಕುಲವಾಗಿ ನಿಂತಿದ್ದವು. ಇಡೀ ಗ್ರಾಮದ ನೂರಾರು ರೈತರ 700 ಕ್ಕೂ ಅಧಿಕ ಎಕರೆಯಷ್ಟು ಎಲೆಬಳ್ಳಿ ಹಾನಿಗೊಳಗಾಗಿವೆ ಎಂದು ರೈತರು ಹೇಳಿದರು.
ಭೆಟ್ಟಿ ನೀಡದ ಅಧಿಕಾರಿಗಳು: ಹಾನಿಯಿಂದ ರೈತರು ತೀವ್ರ ಕಂಗಾಲಾಗಿದ್ದರೂ ಅಧಿಕಾರಿಗಳು ತೋಟಗಳಿಗೆ ಭೆಟ್ಟಿ ನೀಡದೆ ರೈತರ ಗೋಳು ಕೇಳುತ್ತಿಲ್ಲ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಗಣೆ ತೊಂದರೆಯಾದರೆ ಈ ಬಾರಿ ಬೆಳೆಗೆ ಮಳೆರಾಯ ಬಾಯಿಯೊಡ್ಡಿದ್ದಾನೆ. ಹೀಗಾಗಿ ರೈತರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಾಲದ ಸ್ಥಿತಿಯಲ್ಲಿರುವ ರೈತರ ಬದುಕು ಹೇಳತೀರದಾಗಿದೆ ಎಂದು ರೈತರ ಅಂಬೋಣ.