ರಬಕವಿ ಬನಹಟ್ಟಿ ಸಮೀಪದ ಹೊಸೂರಿನ ತೋಟಗಳಿಗೆ ಹೋಗುವ ರಸ್ತೆಯು ಮಳೆಯ ನೀರಿನಿಂದ ತುಂಬಿ ಸಂಚಾರಕ್ಕೆ ತೊಂದರೆಯಾಗಿರುವುದು.

ರಬಕವಿ-ಬನಹಟ್ಟಿ: 123 ಮನೆಗಳಿಗೆ ಹಾನಿ: 10 ಲಕ್ಷ ರೂ. ಹಾನಿ

ರಸ್ತೆ ತುಂಬ ಮಳೆ ನೀರು: ಹೊಸೂರ ಗ್ರಾಮಸ್ಥರಿಗೆ ತೊಂದರೆ

ರಬಕವಿ-ಬನಹಟ್ಟಿ,ಅ15:ಕಳೆದ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಒಟ್ಟು 123 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 10 ಲಕ್ಷ ರೂ.ಗಳವರೆಗೆ ಬೆಳೆ, ಮನೆ, ಜನ ಹಾಗು ಜಾನುವಾರುಗಳಿಗೆ ಸಂಬಂಧಿಸಿದ ಹಾನಿಯಾಗಿದೆ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು.

ತಾಲೂಕಿನ ಕಾಲತಿಪ್ಪಿಯಲ್ಲಿ 2, ಕೆಸರಗೊಪ್ಪ-7, ಮದಭಾವಿ-1, ಗೋಲಬಾವಿ2, ಹಳಿಂಗಳಿ-6, ತೇರದಾಳ-7, ಸಸಾಲಟ್ಟಿ-3, ಕುಲಹಳ್ಳಿ-18, ಬಂಡಿಗಣಿ-4, ಜಗದಾಳ-16, ಚಿಮ್ಮಡ-6, ಯಲ್ಲಟ್ಟಿ-2, ನಾವಲಗಿ-12, ಹಿಪ್ಪರಗಿ-9, ಮಹಾಲಿಂಗಪೂರ-13, ಹನಗಂಡಿ-3, ಮಾರಾಪುರ-3, ಸಂಗಾನಟ್ಟಿ-4, ತಮದಡ್ಡಿ-4, ಬಿಸನಾಳ-1 ಹೀಗೆ ಒಟ್ಟು 123 ಮನೆಗಳಿಗೆ ಹಾನಿಯಾದ ವರದಿಯಾಗಿದೆ ಎಂದು ತಿಳಿಸಿದರು.

ಐದಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಮೀಪದ ಹೊಸೂರಿಗೆ ಮತ್ತು ಹೊಸೂರಿನ ತೋಟಗಳಿಗೆ ಹೋಗುವ ರಸ್ತೆಯು ಸಂಪೂರ್ಣ ಜಲಾವೃತವಾಗಿರುವುದು.

ಈ ರಸ್ತೆಯು ಇಲ್ಲಿಯ ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಆದರೆ ಮಳೆಯ ನೀರಿನಿಂದಾಗಿ ಗ್ರಾಮಸ್ಥರು ಮತ್ತು ರೈತರು ಮುಖ್ಯ ರಸ್ತೆಗೆ ಬರಬೇಕಾದರೆ ಹೊಸೂರ ಗ್ರಾಮವನ್ನು ಸುತ್ತು ಹಾಕಿ ಬರಬೇಕಾಗಿದೆ. ಇದರಿಂದಾಗಿ ಬಹಳಷ್ಟು ತೊಂದರೆಯಾಗಿದೆ. 

ಈ ರಸ್ತೆ ಕೆಳ ಮಟ್ಟದಲ್ಲಿ ಇದ್ದು, ಸುತ್ತ ಮುತ್ತಲಿನ ತೋಟಗಳಿಂದ ಅಪಾರ ಪ್ರಮಾಣದ ನೀರು ಬಂದು ರಸ್ತೆಯ ಮೇಲೆ ನಿಲ್ಲುತ್ತದೆ. ಈ ನೀರು ಹರಿದು ಹೋಗಲು ಯಾವುದೆ ಮಾರ್ಗವಿಲ್ಲದಂತಾಗಿದೆ.