ತೇರದಾಳ ಪಟ್ಟಣದ ಜೀರಗೇರಿಯ ದಂಡೆಯ ಮೇಲಿರುವ ಕುಡಚಿ ಜಮಖಂಡಿ ರಸ್ತೆಯ ಮೇಲೆ ನೀರು ನಿಂತು ಕೆರೆಯಾಗಿದ್ದನ್ನು ತೋರಿಸುತ್ತಿರುವ ಪಟ್ಟಣದ ಪ್ರಮುಖರು.

ರಸ್ತೆ ಮೇಲೆ ನೀರು ನಿಂತು ಕೆರೆಯಾದ ರಸ್ತೆ
ತೇರದಾಳ : ಪಟ್ಟಣದ ಜೀರಗೇರಿಯ ದಂಡೆಯ ಮೇಲಿರುವ ಕುಡಚಿ ಜಮಖಂಡಿ ರಸ್ತೆಯ ಮೇಲೆ ಚರಂಡಿ ನೀರು ಹಾಗೂ ಮಳೆಯ ನೀರು ನಿಂತು ಕೆರೆಯಾಗಿದೆ. ಆದರೆ ಇಲ್ಲಿಯವರೆಗೆ ಪುರಸಭೆಯವರಾಗಲಿ, ಪಿಡಬ್ಲೂಡಿಯವರಾಗಲಿ ಇತ್ತ ಗಮನ ಹರಿಸಿಲ್ಲವೆಂದು ಪಟ್ಟಣದ ಧನಿಗಳಾದ ಪ್ರವೀಣ ನಾಡಗೌಡ, ಯುವ ಮುಖಂಡ ಡಾ.ಪದ್ಮಜೀತ ನಾಡಗೌಡಪಾಟೀಲ ದೂರಿದ್ದಾರೆ.


  ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ದಿನಾಲು ಈ ರಸ್ತೆಯ ಮುಖಾಂತರ ಬೆಳಗಾವಿ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆಯ ಮೇಲೆ ಈ ರೀತಿ ನೀರು ನಿಲ್ಲುವುದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ವಾಹನ ಸವಾರರು ಪುರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದರು. ಕೆಲವು ವಾರ್ಡಗಳಲ್ಲಿ ಬೀದಿ ದೀಪಗಳು ಇಲ್ಲದೇ ಸಾರ್ವಜನಿಕರು ರಾತ್ರಿ ಸಮಯದಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿರುವ ಮುಖ್ಯರಸ್ತೆಗಳು ಸಹ ಹದೆಗೆಟ್ಟು ಹೋಗಿವೆ. ಸಾರ್ವಜನಿಕರು ತಮ್ಮ ವಾರ್ಡಿನ ಸಮಸ್ಯೆಗಳನ್ನು ತಗೆದುಕೊಂಡು ಪುರಸಭೆಗೆ ಹೋದರೆ ಅಧಿಕಾರಿಗಳು ಸಮಾಧಾನದ ಉತ್ತರ ಹೇಳಿ ಕಳುಹಿಸುತ್ತಿದ್ದಾರೆ ಎಂದು ಸಾರ್ವಜನಿಕರ ಮಾತು. ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚತ್ತುಕೊಂಡು ಎಲ್ಲ ಸಮಸ್ಯೆಗಳಿಗೆ ಬೇಗನೆ ಪರಿಹಾರ ಕಂಡು ಹಿಡಿಯಬೇಕು ಎಂದು ಅವರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಪುರಸಭೆಗೆ ಆಯ್ಕೆಯಾದ ಸುರೇಶ ಕಬಾಡಗಿ, ಆಧಿನಾಥ ಸಪ್ತಸಾಗರ ಸೇರಿದಂತೆ ಇತರರು ಇದ್ದರು.