ಬಹಿಷ್ಕಾರ ಚಳವಳಿ
( Boycott movement )
************************
ಸಾಮಾಜಿಕ ಜಾಲತಾಣಗಳ ಶುದ್ದೀಕರಣ ಚಳವಳಿ ನಮ್ಮ ನಮ್ಮ ಕೈಲಾದಷ್ಟು........
-------------------------------------
ಹೌದು, ಇಂದು ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳು ನಮ್ಮೆಲ್ಲರ ಸಂಪರ್ಕ ಸಾಧನಗಳಾಗಿರುವುದು ತಿಳಿದಿರುವ ವಿಷಯ. ಆದರೆ ಅವು ಈಗ ನಿಧಾನವಾಗಿ ಮಲಿನವಾಗತೊಡಗಿವೆ. ಅಸಹನೀಯ ವಾತಾವರಣ ಸೃಷ್ಟಿ ಮಾಡುತ್ತಿವೆ. ಸಮಾಜದ ಪ್ರತಿಬಿಂಬವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಫಲಿತವಾಗುತ್ತಿದೆ ಎಂಬುದು ನಿಜ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಮೂಹ ಸಂಪರ್ಕ ಸಾಧ್ಯವಾಗುವುದರಿಂದ ಇದರಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವ ನಾವುಗಳು ಮನಸ್ಸು ಮಾಡಿದರೆ ಸ್ವಲ್ಪ ಮಟ್ಟಿನ ಶುದ್ದತೆ ಖಂಡಿತ ಸಾಧ್ಯವಿದೆ.
ಹಾಗಾದರೆ ನಾವು ಮಾಡಬಹುದಾದದ್ದು ಏನು ?
ಒಬ್ಬ ವ್ಯಕ್ತಿ ಆತ ಯಾರೇ ಆಗಿರಲಿ, ಯಾವ ಪಕ್ಷ ಜಾತಿ ಭಾಷೆ ಧರ್ಮ, ನಮ್ಮ ಕುಟುಂಬ, ನಮ್ಮ ಸ್ನೇಹಿತ, ನಮ್ಮ ಗುರು ಹಿತೈಷಿ ಯಾರೇ ಆಗಿರಲಿ ಒಂದು ವೇಳೆ ಸಾಮಾಜಿಕ ಜಾಲತಾಣಗಳ ಚರ್ಚೆ ಅಥವಾ ಅಭಿಪ್ರಾಯ ವ್ಯಕ್ತಪಡಿಸುವಾಗ ಏಕ ವಚನ ಉಪಯೋಗಿಸುವುದು, ಅಶ್ಲೀಲ ಭಾಷೆ ಬರೆಯುವುದು, ಹಿಂಸಾತ್ಮಕ ಮನೋಭಾವಕ್ಕೆ ಆಹ್ವಾನಿಸುವುದು, ಮಿತಿ ಇಲ್ಲದ ನಿಂದನೆ, ಅಸಹ್ಯಕರ ಸನ್ನೆ ಬಳಸುವುದು, ಕಾನೂನಿನ ವಿರುದ್ಧವಾದ ಆಕ್ರಮಣಕಾರಿ ಧೋರಣೆ ಪ್ರದರ್ಶಿಸುವುದು ಒಟ್ಟಿನಲ್ಲಿ ನಮ್ಮ ಅರಿವಿಗೆ ಸಹಿಸಲಸಾಧ್ಯ ಎಂಬ ಭಾವ ಮೂಡಿಸುವ ಯಾರೇ ಆಗಲಿ ಒಂದು ಅಥವಾ ಎರಡು ಎಚ್ಚರಿಕೆ ನೀಡಿ ಅವರನ್ನು ಕನಿಷ್ಠ ಒಂದು ವರ್ಷದ ಅವಧಿಗೆ ಬ್ಲಾಕ್ ಮಾಡುವುದು ಮತ್ತು ಸಾಧ್ಯವಾದರೆ ಯಾವುದೇ ಅಪಾಯ ಇಲ್ಲ ಎನಿಸಿದರೆ ಇತರ ಗೆಳೆಯರೊಂದಿಗೆ ಮಾಹಿತಿ ಹಂಚಿಕೊಂಡು ಸಾಮೂಹಿಕ ಬಹಿಷ್ಕಾರ ಹಾಕಬೇಕು. ಆಗ ಆ ರೀತಿಯ ಜನರಲ್ಲಿ ಸ್ವಲ್ಪವಾದರೂ ಜಾಗೃತಿ ಮೂಡಿ ಒಂದಷ್ಟು ನಿಯಂತ್ರಣ ಸಾಧ್ಯವಾಗಬಹುದು.
ಕೆಲವು ವಿಷಯಗಳಲ್ಲಿ ಅನೇಕ ಪಡ್ಡೆಗಳು ತಮ್ಮ ಮಿತಿಯನ್ನು ಮೀರಿ ಮುಂದಿನ ಪರಿಣಾಮಗಳ ಅರಿವಿಲ್ಲದೆ ರೌಡಿಗಳಂತೆ ಮಾತನಾಡುತ್ತಾರೆ. ಇನ್ನು ಕೆಲವರು ಅಸೂಯೆಯಿಂದ ಬೇಕಂತಲೇ ಉದ್ರೇಕಗೊಳಿಸಲು ನೀಚ ಪದಗಳನ್ನು ಉಪಯೋಗಿಸುತ್ತಾರೆ. ಕೆಲವು ಪಕ್ಷ ಮತ್ತು ಸಂಘಟನೆಗಳು ಇದಕ್ಕಾಗಿಯೇ ಏಜೆಂಟ್ ಗಳನ್ನು ನೇಮಿಸಿದ್ದಾರೆ. ಇದೊಂದು ಗೊಬ್ಬರದ ಗುಂಡಿಯಾಗಿವುದು ಬೇಡ.
ಇದು ನಮ್ಮ ನಮ್ಮ ಮಿತಿಯಲ್ಲಿಯೇ ಮಾಡಬಹುದಾದ ಕೆಲಸ. ಆದರೆ ಚರ್ಚೆ ವಾಗ್ವಾದ ಭಿನ್ನ ಅಭಿಪ್ರಾಯ, ಆಸ್ತಿಕ ನಾಸ್ತಿಕ ವಾದಗಳು ಮತ್ತು ಕಾನೂನಿನ ಅಡಿಯಲ್ಲಿ ವ್ಯಕ್ತಪಡಿಸಬಹುದಾದ ಯಾವುದೇ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಇದು ಅನ್ವಯಿಸುವುದಿಲ್ಲ. ಕೆಟ್ಟ ಕೊಳಕರು ಎಂದು ನಮಗೆ ಅನಿಸುವವರ ಬಗ್ಗೆ ಮಾತ್ರ ಈ ಬಹಿಷ್ಕಾರ.
ಏಕೆಂದರೆ ನಿಜಕ್ಕೂ ಈ ಸಾಮಾಜಿಕ ಜಾಲತಾಣ ಅನೇಕ ಸಾಮಾನ್ಯ ಜನರಿಗು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ, ತಮ್ಮ ಸಾಹಿತ್ಯ ಸಂಗೀತ ಕಲೆ ಮುಂತಾದ ಪ್ರತಿಭೆ ಪ್ರದರ್ಶಿಸುವ, ಎಷ್ಟೋ ಜನರಿಗೆ ಒಳ್ಳೆಯ ಗೆಳಯ, ಗೆಳತಿ, ಹಿತೈಷಿ, ಗುರು, ಮಾರ್ಗದರ್ಶಕ, ಸ್ಪೂರ್ತಿದಾಯಕ, ಅಷ್ಟೇ ಏಕೆ ಅನೇಕ ಹಿರಿಯರಿಗೆ ಸಮಯ ಕಳೆಯುವ ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸುತ್ತಿದೆ. ನಮ್ಮ ತಾಯಿ ಭಾಷೆ ನಿಜಕ್ಕೂ ಮತ್ತೊಮ್ಮೆ ಪ್ರಕಾಶಿಸಲು ಸಹ ಈ ವೇದಿಕೆ ಅನುವು ಮಾಡಿಕೊಟ್ಟಿದೆ.
ಕೆಲವು ಕೆಟ್ಟ ಹುಳುಗಳು ವಿಚಾರ ವಿನಿಮಯ ಮೀರಿ ಮೂರನೇ ದರ್ಜೆಯ ಭಾಷೆ ಬಳಸುತ್ತಿರುವುದು ಕಂಡುಬರುತ್ತಿದೆ. ಅದನ್ನು ನಾವುಗಳು ಸ್ವಯಂ ನಿಯಂತ್ರಿಸದಿದ್ದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗಬಹುದು.
ಇದನ್ನು ವೈಯಕ್ತಿಕ ನೆಲೆಯಲ್ಲಿ ಮಾಡುವುದಕ್ಕಿಂತ ಸಾಮೂಹಿಕ ನೆಲೆಯಲ್ಲಿ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಬ್ಲಾಕ್ ಮಾಡಿದರೆ ಅವರು ಖಂಡಿತ ಬಹಳಷ್ಟು ಕಳೆದುಕೊಳ್ಳುತ್ತಾರೆ. ಇದು ನಮಗಿರುವ ಸ್ವಾತಂತ್ರ್ಯವೂ ಹೌದು.
ಸೈಬರ್ ಕ್ರೈಮ್ ಪೋಲೀಸ್ ಕಂಪ್ಲೇಂಟ್ ಮುಂತಾದ ಮಾರ್ಗಗಳು ಇದ್ದರು ಅದನ್ನು ಎಲ್ಲರಿಗೂ ಬಳಸಲು ಸಾಧ್ಯವಾಗುವುದಿಲ್ಲ. ಈ ಬ್ಲಾಕ್ ಚಳವಳಿ ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ನಮ್ಮ ವಿವೇಚನೆ ಬಳಸಿ ಉಪಯೋಗಿಸಬಹುದು.
ಆದ್ದರಿಂದ ದಯವಿಟ್ಟು ನಾವುಗಳು ಇದನ್ನು ಪ್ರಯತ್ನಿಸೋಣ ಮತ್ತು ಪ್ರಯೋಗಿಸೋಣ. ಕೆಟ್ಟ ಜನರ ನಿಯಂತ್ರಣ ಮತ್ತು ಬೇರ್ಪಡಿಸುವಿಕೆಯಿಂದ ಮುಂದಿನ ದಿನಗಳಲ್ಲಿ ಅವರು ಸಹ ಸಭ್ಯತೆಯ ಪರಿಧಿಯೊಳಗೆ ಬರಲು ಒಂದು ಪಾಠ ಕಲಿಸೋಣ.
ಇನ್ನು ಮುಂದೆ ಸಹಿಸಲಸಾಧ್ಯ ಭಾಷೆ ಉಪಯೋಗಿಸುವ ಗೆಳೆಯರನ್ನು
" ಬ್ಲಾಕ್ " ಮಾಡಲಾಗುತ್ತದೆ ಎಂಬ ಎಚ್ಚರಿಕೆ ಮತ್ತು ಮನವಿಯೊಂದಿಗೆ ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ......
" ಒಳ್ಳೆಯವರಾಗೋಣ "
ಸಾಮಾಜಿಕ ಜಾಲತಾಣಗಳನ್ನು ಸಹನೀಯಗೊಳಿಸೋಣ.
ನಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳೋಣ.
ಸಮಾಜದ ಉತ್ತಮ ಬದಲಾವಣೆಗೆ ಕಾರಣವಾಗೋಣ.......
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ : ವಿವೇಕಾನಂದ. ಹೆಚ್.ಕೆ.

Social Plugin