ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ನಿರ್ಮಿಸಲಾದ ನಗರಸಭೆಯ ವಾಣಿಜ್ಯ ಸಂಕೀರ್ಣ ಶಿಥಿಲಾವಸ್ಥೆಯಲ್ಲಿರುವುದು.
ಶಿಥಿಲಾವಸ್ಥೆಯಲ್ಲಿ ನಗರಸಭೆಯ ವಾಣಿಜ್ಯ ಸಂಕೀರ್ಣ
ರಬಕವಿ-ಬನಹಟ್ಟಿ,ಸೆ9: ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಬನಹಟ್ಟಿ ನಗರದ ಕಾಡಸಿದ್ಧೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ನಗರಸಭೆಯು ಎರಡುವರೆ ದಶಕಗಳ ಹಿಂದೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿತ್ತು. ಆದರೆ ಇಂದು ಈ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಅಲ್ಲಿನ ಜನರಿಗೆ ಬಹಳಷ್ಟು ತೊಂದರೆಯನ್ನುಂಟು ಮಾಡುತ್ತಿದೆ.
ಒಟ್ಟು ಎರಡು ಭಾಗಗಳಲ್ಲಿ ಹನ್ನೆರಡು ವಾಣಿಜ್ಯ ಸಂಕೀರ್ಣಗಳನ್ನು ನಗರಸಭೆ ನಿರ್ಮಾಣ ಮಾಡಿತ್ತು. ಎರಡು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಆರು ಕಾಂಪ್ಲೆಕ್ಸ್ ಗಳನ್ನು ನಗರಸಭೆಯವರು ಅಚ್ಚುಕಟ್ಟಾಗಿ ರಿಪೇರಿ ಮಾಡಿದ್ದರು. ಆದರೆ ಇನ್ನೂ ಉಳಿದ ಆರು ವಾಣಿಜ್ಯ ಸಂಕೀರ್ಣಗಳ ಕಟ್ಟಡ ಬೀಳುವ ಹಂತದಲ್ಲಿದೆ. ಇಲ್ಲಿಯ ಮೂರು ವಾಣಿಜ್ಯ ಸಂಕೀರ್ಣದಲ್ಲಿ ನಗರದ ಕೇಂದ್ರ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಇನ್ನೂ ಉಳಿದ ಮೂರರಲ್ಲಿ ಖಾಸಗಿಯವರು ವ್ಯಾಪಾರ ಮಾಡುತ್ತಿದ್ದಾರೆ.
ವಾಣಿಜ್ಯ ಸಂಕೀರ್ಣದ ಮೇಲ್ಛಾವಣೆಯ ಸಿಮೆಂಟ್ ಪದರುಗಳಲ್ಲಿ ಬಿರುಕು ಬಿಟ್ಟಿರುವುದರಿಂದ ಅವು ಬೀಳುವ ಹಂತದಲ್ಲಿದೆ. ಅದೇ ರೀತಿಯಾಗಿ ಮೇಲೆ ಹೋಗಲು ಕಟ್ಟೆಗಳಿದ್ದು ಕಟ್ಟೆಯ ತಡೆಗೋಡೆಗಳು ಬಿದ್ದಿವೆ.
ಸಂಕೀರ್ಣದ ಮುಂಭಾಗದಲ್ಲಿ ಕಲ್ಲಿನ ಹಾಸುಗಳು ಕೂಡಾ ಇಲ್ಲವಾಗಿವೆ. ಇನ್ನೂ ವಾಣಿಜ್ಯ ಸಂಕೀರ್ಣದ ಕೆಳಗಡೆ ಖಾಲಿ ಜಾಗೆ ಇದೆ. ಇದು ಹಂದಿ, ನಾಯಿಗಳ ಗೂಡಾಗಿದೆ. ಸುತ್ತ ಮುತ್ತಲಿನ ಸಾರ್ವಜನಿಕರು ಇಲ್ಲಿ ಕಲ್ಲು ಮಣ್ಣುಗಳನ್ನು ಹಾಕಿದ್ದಾರೆ. ಇನ್ನೂ ಇಲ್ಲಿ ಅಪಾರ ಪ್ರಮಾಣದ ಕಸ ಶೇಖರಣೆಗೊಂಡಿದೆ. ಅದನ್ನು ಅಲ್ಲಿಯೇ ಚೀಲದಲ್ಲಿ ತುಂಬಿಡಲಾಗಿದೆ. ನಗರಸಭೆಯವರು ಅದನ್ನು ವಿಲೇವಾರಿ ಮಾಡದೆ ಇರುವುದರಿಂದ ಅಲ್ಲಿಯ ಪ್ರದೇಶ ಗಬ್ಬೆದ್ದು ನಾರುತ್ತಿದೆ.
ಆದ್ದರಿಂದ ಈ ವಾಣಿಜ್ಯ ಸಂಕೀರ್ಣದಿಂದ ಅನಾಹುತ ಸಂಭವಿಸುವುದಕ್ಕಿಂತ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಇಲ್ಲಿಯ ವಾಣಿಜ್ಯ ಸಂಕೀರ್ಣಗಳನ್ನು ರಿಪೇರಿ ಮಾಡುವುದರ ಜೊತೆಗೆ ಮೇಲೆ ಹೋಗುವ ಸ್ಥಳಕ್ಕೆ ಗೇಟ್‍ಗಳನ್ನು ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Social Plugin