ಹೊಸೂರಿನಲ್ಲಿ 21ದಿನಗಳವರೆಗೆ ನಡೆದ ಮಹಿಳೆಯರಿಗೆ ಯೋಗ ಶಿಬಿರದ ಸಮಾರೋಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಹಳೆಹುಬ್ಬಳ್ಳಿ ನೀಲಕಂಠಮಠದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯರು ಮಾತನಾಡಿದರು.

ಮಹಿಳೆಯರಿಗೆ 21ದಿನಗಳ ಯೋಗ ತರಬೇತಿ ಶಿಬಿರ ಸಮಾರೋಪ
ಮಹಿಳೆಯರು ಯೋಗದ ಮಹತ್ವ ಅರಿಯಬೇಕು-ಶಿವಶಂಕರ ಶ್ರೀ

ರಬಕವಿ-ಬನಹಟ್ಟಿ,ಸೆ9: ಇಡೀ ವಿಶ್ವವೇ ತಲೆಬಾಗಿ 192 ದೇಶಗಳು  ಯೋಗವನ್ನು ಒಪ್ಪಿಕೊಂಡಿವೆ. ಆರೋಗ್ಯಕ್ಕಾಗಿ, ಮಾನಸಿಕ ನೆಮ್ಮದಿಗಾಗಿ ನಿತ್ಯ ಯೋಗ ಮಾಡಬೇಕು. ಆರೋಗ್ಯವೇ ಭಾಗ್ಯ ಹೊರತು ಗೋಲ್ಡ್ ಈಸ್ ವೆಲ್ಥ್ ಅಂದಿಲ್ಲ. ಈ ಕೊರೊನಾ ಕಾಲದಲ್ಲಿ ದೇಶವೇ ಸ್ತಬ್ಧವಾದ ಸಂದರ್ಭದಲ್ಲಿ ಆರೋಗ್ಯದ ಮಹತ್ವ ಅರಿವಾಗಿದೆ. ಪ್ರತಿಯೊಬ್ಬರೂ ಯೋಗ ಮಾಡಬೇಕು. ಯೋಗದ ಮಹತ್ವವನ್ನು ಮಹಿಳೆಯರು ಅರಿಯಬೇಕೆಂದು ಹಳೆಹುಬ್ಬಳ್ಳಿ ನೀಲಕಂಠಮಠದ ಜಗದ್ಗುರು ಶ್ರೀಶಿವಶಂಕರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಹೊಸೂರು ನೀಲಕಂಠಮಠದ ಸಭಾಭವನದಲ್ಲಿ 21ದಿನಗಳವರೆಗೆ ನಡೆದ ಮಹಿಳೆಯರಿಗೆ ಯೋಗ ಶಿಬಿರದ ಸಮಾರೋಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಒಂದು ಗಂಟೆಯಾದರೂ ಪ್ರತಿದಿನ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕೆಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ರಬಕವಿ-ಬನಹಟ್ಟಿ ತಾಲೂಕಾ ಘಟಕದ ಅಧ್ಯಕ್ಷ ಮ.ಕೃ.ಮೇಗಾಡಿ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿ, ಮೌನ ಮನಸ್ಸನ್ನು ಶುದ್ಧಿ ಮಾಡುತ್ತದೆ, ಸ್ನಾನ ದೇಹವನ್ನು ಶುದ್ಧಿ ಮಾಡುತ್ತದೆ, ಪ್ರಾರ್ಥನೆ ಆತ್ಮ ಶುದ್ಧಿ ಮಾಡುತ್ತದೆ, ಯೋಗಜ್ಞಾನ ನಮ್ಮ ಇಡೀ ಜೀವನವನ್ನೇ ಶುದ್ಧಿ ಮಾಡುತ್ತದೆ. ಆರೋಗ್ಯ ಸುಧಾರಣೆಯಿಂದ ಹಿಡಿದು ಮೋಕ್ಷ ಸಾಧನೆಗೆ, ರೋಗಗಳಿಂದ ದೂರವಿರಲು ಯೋಗ ಅವಶ್ಯವೆಂದರು.
ಸಮಾಜ ಸೇವಕರಾದ ನಂದು ಗಾಯಕವಾಡ, ಸುವರ್ಣಾ ಕವಟಗಿ, ಡಾ. ಸತೀಶ ಮಾಳಿ, ಜ್ಯೋತಿಷಿ ಶಂಕರೆಪ್ಪಣ್ಣ ಅಮ್ಮಲಝೇರಿ ಮಾತನಾಡಿದರು.
ಧರೆಪ್ಪ ಉಳ್ಳಾಗಡ್ಡಿ, ಗಿರಮಲ್ಲಪ್ಪ ಬಾಗೇವಾಡಿ, ನಾಮದೇವ ಆಲಗೂರ, ಅಶೋಕ ಹಳ್ಳೂರ, ನಗರಸಭಾ ಸದಸ್ಯರಾದ ಅರುಣ ಬುದ್ನಿ, ರೇಖಾ ರವಿ ಕೊರ್ತಿ, ಕಾಮಧೇನು ಮಾತೃ ಮಂಡಳಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಡೊಮ್ಮನಾಳ, ಶಿಕ್ಷಕ ಮಹೇಶಕುಮಾರ ಕವಟಗೊಪ್ಪ ವೇದಿಕೆಯಲಿದ್ದರು.