ರಬಕವಿ ಬಸ್ ನಿಲ್ದಾಣದಲ್ಲಿ ನಿರ್ಮಾಕರು ಮತ್ತು ಚಾಲಕರು ಧ್ವಜದ ಕಂಬದ ಸುತ್ತಲು ಖಾಲಿ ಇರುವ ಸ್ಥಳವನ್ನು ಸ್ಚಚ್ಚಗೊಳಿಸುತ್ತಿರುವುದು.

 ರಬಕವಿ ಬಸ್ ನಿಲ್ದಾಣದಲ್ಲಿ ಚಾಲಕ ಹಾಗೂ ನಿರ್ವಾಹಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ಗಿಡಗಳನ್ನು ಹಚ್ಚುತ್ತಿರುವ ಚಿತ್ರ.

 ರಬಕವಿ ಬಸ್ ನಿಲ್ದಾಣದಲ್ಲಿ ಸ್ವಚ್ಚಗೊಳಿಸಿ ಸುಂದರ ಪರಿಸರ ನಿರ್ಮಿಸಿದ ಸಿಬ್ಬಂದಿಗಳು
ಹಸಿರು ವನವಾಗುತ್ತಿರುವ ಬಸ್ ನಿಲ್ದಾಣ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ11:  ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳ ಆವರಣಗಳು ಲಾಕ್‍ಡೌನ್ ನಂತರ ಕಸದ ತೊಟ್ಟಿಯಂತಾಗಿದ್ದವು. ಅವುಗಳ ನಿರ್ವಹಣೆಯಾಗದ ಕಾರಣ ಎಲ್ಲೆಂದರಲ್ಲಿ ಕಸದಿಂದ ಕೂಡಿ ಕಸದ ತೊಟ್ಟಿಯಂತಾಗಿದ್ದವು. ಆದರೆ ಸಾರಿಗೆ ಸಿಬ್ಬಂದಿಗಳ ಶ್ರಮದಿಂದ ಅವು ಇದೀಗ ಹಸಿರು ಸಿರಿಯಾಗಿ ಹೊಳೆಯುತ್ತಿರುವದು ವಿಶೇಷ.
ಲಾಕ್‍ಡೌನ್ ಮುಗಿದ ಬಳಿಕ ಬಸ್‍ಗಳ ಸಂಚಾರ ಪ್ರಾರಂಭವಾದರು ಪ್ರಯಾಣಿಕರು ಹೆಚ್ಚಿನ ಪ್ರಮಾಣದಲ್ಲಿ ಬಸ್‍ಗಳಲ್ಲಿ ಪ್ರಯಾಣಿಸದ ಕಾರಣ ಹೆಚ್ಚಿನ ಬಸ್‍ಗಳು ಓಡಲಿಲ್ಲ. ನಿರ್ವಾಹಕರು ಮತ್ತು ಚಾಲಕರು ಕೆಲಸವಿಲ್ಲದೆ ಡಿಪೋಗಳಲ್ಲಿ ಖಾಲಿ ಕುಳಿತುಕೊಳ್ಳುವಂತಾ ವಾತಾವರಣ ನಿರ್ಮಾಣವಾಗಿತ್ತು. ಈ ಸಮಯವನ್ನು ವಿನಾಕಾರಣ ಖಾಲಿ ವ್ಯರ್ಥ ಮಾಡುವುದಕ್ಕಿಂತ ಪ್ರತಿದಿನ ಒಂದು ನಿಲ್ದಾಣಕ್ಕೆ ತೆರಳಿ ಸ್ವಚ್ಚತೆ ಮಾಡಬೇಕೆಂದು ತೀರ್ಮಾನಿಸಿ ಇದಕ್ಕೊಂದು ಯೋಜನೆ ರೂಪಿಸಿಕೊಂಡರು.
ನಿಲ್ದಾಣದಲ್ಲಿನ ಶೌಚಾಲಯ ದುರಸ್ತಿ, ಬಳಕೆಯಾದ ಸ್ಥಳಗಳಲ್ಲಿ ಕೆಂಪು ಮಣ್ಣು ಹಾಕಿ ಅಲ್ಲೆಲ್ಲ ಗಿಡಗಳನ್ನು ನೆಡುವುದು. ಪ್ರಯಾಣಿಕರ ಆಸನಗಳನ್ನು ಸರಿಯಾಗಿ ದುರಸ್ತಿ ಮಾಡುವುದು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಪ್ರಯಾಣಿಕರಿಗೆ ದೊರಕುವಂತೆ ನಿಲ್ದಾಣಗಳನ್ನು ಸುಚಿಗೊಳಿಸಿದ ಸಿಬ್ಬಂದಿಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಮುಖವಾಗಿ ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳಿಗೆ ಬರುವ ನಿತ್ಯ ಪ್ರಯಾಣಿಕರ ಮನ ತಣಿಸುವಲ್ಲಿ ಇದೀಗ ಉದ್ಯಾನವನ ನಿರ್ಮಿಸುವಲ್ಲಿ ಸಾರಿಗೆ ನಿಯಂತ್ರಕರು ಮುಂದಾಗಿರುವದು ವಿಶೇಷ. ಖಾಲಿಯಿರುವ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಪ್ರಕೃತಿಯ ಮುದ ನೀಡುವಲ್ಲಿ ಕಾರಣರಾಗುತ್ತಿದ್ದಾರೆ.
ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳ ಆವರಣಗಳು ಗಬ್ಬೆದ್ದು ನಾರುತ್ತಿದ್ದವು. ಶೌಚಾಲಯ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಲ್ಲಿ ಖಾಲಿ ಇದ್ದ ಜಾಗೆಯನ್ನು ಕಲ್ಲಿನಿಂದ ಚಿಕ್ಕಚಿಕ್ಕ ಕಾಲಂಗಳನ್ನು ಹಾಕಿ ಅಲ್ಲಿನ ವಾತಾವರಣವನ್ನೇ ಬದಲಿಸಿದ್ದಾರೆ ಸಿಬ್ಬಂದಿಗಳು.
`ನಮಗೆ ಯಾರೊಬ್ಬ ಅಧಿಕಾರಿಯೂ ಆದೇಶ ಮಾಡಿಲ್ಲ, ದೇಶದ ಪ್ರಧಾನಿಯವರೇ ಕೈಯಲ್ಲಿ ಕಸಬರಿಗೆ ಹಿಡಿದ ಸ್ವಚ್ಚತೆಗೆ ಮುಂದಾದಾಗ ನಾವು ಸಾಮಾನ್ಯ ಸರ್ಕಾರಿ ನೌಕರರಾಗಿ ಏಕೆ ಈ ಕೆಲಸಕ್ಕೆ ಮುಂದಾಗಬಾರದು ಎಂದು ನಾವೇ ಸ್ವತಃ ಪ್ರೇರಣೆಗೊಂಡ ಒಂದು ನಿಲ್ದಾಣದಲ್ಲಿ ವಾರಪೂರ್ತಿ ಈ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ನಿಲ್ದಾಣಗಳನ್ನು ಸುಚಿಗೊಳಿಸಿದ್ದು ನಮಗೆ ಆತ್ಮ ತೃಪ್ತಿ ತಂದಿದೆ.’---- ಪ್ರಭು ಬಿದರಿ. ನಿರ್ವಾಹಕ.
`ನಾವು ಯಾವುದೇ ಆದೇಶ ಮಾಡದಿದ್ದರೂ ನಮ್ಮ ಘಟಕದ ಚಾಲಕರು ಹಾಗೂ ನಿರ್ವಾಹಕರು ಸ್ವಯಂ ಪ್ರೇರಣೆಯಿಂದ ನಿಲ್ದಾಣಗಳನ್ನು ಸುಚಿಗೊಳಿಸಿ ಅಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲು ಮುಂದಾಗಿದ್ದು ನನ್ನ ವೃತ್ತಿಯಲ್ಲಿಯೇ ಹೊಸ ಅನುಭವ ನೀಡಿದೆ. ನಮ್ಮೆಲ್ಲ ಸಿಬ್ಬಂದಿಗಳಿಗೆ ನಮ್ಮದೊಂದು ಹ್ಯಾಟ್ಸಅಪ್.’----ಎಸ್. ಎಸ್. ತೇಲಿ. ಸಾರಿಗೆ ಸಹಾಯಕ ಸಂಚಾರ ಅಧೀಕ್ಷಕ. ಜಮಖಂಡಿ.