ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಸರ್ಕಾರದ ಸುಗ್ರೀವಾಜ್ಞೆ ವಿರೋಧಿಸಿ ಜೆಡಿಎಸ್‍ನಿಂದ ಪ್ರತಿಭಟನೆ ಮೂಲಕ ಮನವಿ ಅಲ್ಲಿಸಲಾಯಿತು.



                 ಸರ್ಕಾರದ ಸುಗ್ರೀವಾಜ್ಞೆ: ಸರ್ವಾಧಿಕಾರ ಧೋರಣೆ
ರೈತ ಹಾಗು ಕಾರ್ಮಿಕರ ವಿರೋಧಿ ಕಾಯ್ದೆಗೆ ಜೆಡಿಎಸ್ ವಿರೋಧ
ರಬಕವಿ-ಬನಹಟ್ಟಿ,ಸೆ11: ಪ್ರಗತಿಪರ ರೈತ ಹಾಗು ಕಾರ್ಮಿಕರ ಪರ ಇರುವ ಕಾಯ್ದೆಗಳಾದ ಕರ್ನಾಟಕ ಭೂ ಸುಧಾರಣೆ ಕಾಯ್ದೆ-1967, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ-1966 ಹಾಗು ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ನಿರ್ಮೂಲನಾ) ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಜೆಡಿಎಸ್ ಪ್ರತಿಭಟನೆ ನಡೆಸಿತು.
ಶುಕ್ರವಾರ ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಮನವಿ ಅರ್ಪಿಸುವ ಮೂಲಕ ಸರ್ಕಾರದ ಧೋರಣೆ ವಿರೋಧಿಸಿ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಹುಣಶ್ಯಾಳ ಮಾತನಾಡಿ ಸೆಕ್ಷನ್ 63 ರ ಪ್ರಕಾರ 5 ಸದಸ್ಯರನ್ನೊಳಗೊಂಡ ಒಂದು ಕೃಷಿಕ ಕುಟುಂಬ 10 ಯುನಿಟ್‍ಗಳಷ್ಟು ಕೃಷಿಭೂಮಿಯನ್ನು ಹೊಂದಬಹುದು ಮತ್ತು 5 ಸದಸ್ಯರಿಗಿಂತ ಮೇಲ್ಪಟ್ಟ ಕುಟುಂಬ ಪ್ರತಿ ಹೆಚ್ಚುವರಿ ಸದಸ್ಯನಿಗೆ ಎರಡು ಯುನಿಟ್‍ಗಳನ್ನು ಹೊಂದಬಹುದು. ಆದರೆ ಒಟ್ಟಾರೆ ಭೂ ಹಿಡುವಳಿ ಒಂದು ಕುಟುಂಬ 20 ಯುನಿಟ್‍ಗಳಿಗೆ ಮೀರಬಾರದೆಂದು ನಿರ್ಬಂಧ ಹಾಕಲಾಗಿತ್ತು. ಆದರೆ ರಾಜ್ಯ ಸರ್ಕಾರ ಈಗ ಸುಗ್ರೀವಾಜ್ಞೆ ಮುಖಾಂತರ ತಂದಿರುವ ತಿದ್ದುಪಡಿಯಲ್ಲಿ 5 ಸದಸ್ಯರನ್ನು ಒಳಗೊಂಡ ಕುಟುಂಬ 20 ಯುನಿಟ್‍ಗಳನ್ನು ಹೊಂದುವದು ಮತ್ತು 5 ಸದಸ್ಯರಿಗಿಂತ ಮೇಲ್ಪಟ್ಟ ಕುಟುಂಬಕ್ಕೆ ಪ್ರತಿ ಹೆಚ್ಚುವರಿ ಸದಸ್ಯನು ಎರಡು ಯುನಿಟ್‍ಗಳನ್ನು ಹೊಂದಬಹುದು. ಆದರೆ ಆ ಕುಟುಂಬದ ಒಟ್ಟು ಭೂ ಹಿಡುವಳಿ 40 ಯುನಿಟ್‍ಗಳಿಗೆ ಮೀರಬಾರದು ಎಂದು ನಿರ್ಬಂಧಿಸಲಾಗಿದೆ.
ರಾಜ್ಯದ ಕೃಷಿ ಗಣತಿ 2015ನ್ನು ಅವಲೋಕಿಸಿದಾಗ ರಾಜ್ಯದಲ್ಲಿ ಬಹುತೇಕ ಕೃಷಿ ಭೂಮಿಯನ್ನು 1 ಎಕರೆ ಹೊಂದಿರುವ ಅತೀ ಸಣ್ಣ ರೈತರಿಂದ ಹಿಡಿದು ಮೂರು ಎಕರೆ ಹೊಂದಿರುವ ಸಣ್ಣ ರೈತರ, 32 ಎಕರೆ ಕೃಷಿ ಹೊಂದಿರುವ ದೊಡ್ಡ ರೈತರ ನಡುವೆ ಹಂಚಿಕೆಯಾಗಿರುತ್ತದೆ. ಇದು ನಮ್ಮ ರಾಜ್ಯದ ರೈತಾಪಿ ವರ್ಗದ ಚಿತ್ರಣ. ಸೆಕ್ಷನ್ 70-0 ಅಡಿಯಲ್ಲಿ ಕೃಷಿಯೇತರ ಮೂಲಗಳಿಂದ ವಾರ್ಷಿಕ ಆದಾಯ 25 ಲಕ್ಷಗಳಿಗಿಂತ ಹೆಚ್ಚು ಹೊಂದಿರುವ ವ್ಯಕ್ತಿ ಅಥವಾ ಕುಟುಂಬ ಕೃಷಿ ಭೂಮಿಯನ್ನು ಖರೀದಿಸಲು ನಿರ್ಬಂಧಿಸಲಾಗಿದೆ. ಕೃಷಿಕರಲ್ಲದವರು, ಶಿಕ್ಷಣ ಸಂಸ್ಥೆ, ಮಠ-ಮಾನ್ಯ, ಟ್ರಸ್ಟ್ ಹಾಗು ಸೊಸೈಟಿಗಳು ಸೇರಿದಂತೆ ಇತರರು ಕೃಷಿ ಭೂಮಿಯನ್ನು ಹೊಂದಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಭೂ ಸುಧಾರಣೆ ಕಾಯ್ದೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಮತ್ತು ಈ ಕಾಯ್ದೆ ಸುಗ್ರೀವಾಜ್ಞೆಯನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಉಪತಹಶೀಲ್ದಾರ ಬಸವರಾಜ ಬಿಜ್ಜರಗಿಯವರಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಪಕ್ಷದ ತೇರದಾಳ ಕ್ಷೇತ್ರದ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಚಿದಾನಂದ ಧರ್ಮಟ್ಟಿ, ಭುಜಬುಲಿ ಕೆಂಗಾಲಿ, ನಗರ ಘಟಕದ ಅಧ್ಯಕ್ಷ ಪರಮೇಶ ಹಡಗಲಿ, ಸುರೇಶ ಮಡಿವಾಳರ, ಪ್ರಕಾಶ ಸಣಕಾಲ್, ಕುಮಾರ ಮಟ್ಟಿಕಲ್ಲಿ, ಅಬೂಬಕರ ಗಾಡಬೋಲೆ, ವಿಜುಗೌಡ ಪಾಟೀಲ, ಶಾನೂರ ರಾಮದುರ್ಗ ಉಪಸ್ಥಿತರಿದ್ದರು.