ಬನಹಟ್ಟಿಯ ಗಾಂಧಿವೃತ್ತ ಬಳಿ ಕೆಟ್ಟು ಹೋಗಿರುವ ಸಿಸಿ ಕ್ಯಾಮರಾ.
ಕಣ್ಮುಚ್ಚಿದ ಸಿಸಿ ಕ್ಯಾಮರಾ: ತಲೆ ಎತ್ತಿದ ಅಕ್ರಮ ಚಟುವಟಿಕೆಗಳು -ಮಲ್ಲಿಕಾರ್ಜುನ ತುಂಗಳ ರಬಕವಿ-ಬನಹಟ್ಟಿ,ಸೆ11: ಕಳೆದ 10 ವರ್ಷಗಳ ಹಿಂದೆ ಬನಹಟ್ಟಿಯ ಗಾಂಧಿ ವೃತ್ತದ ಬಳಿ ಎತ್ತರವಾಗಿ ಅಳವಡಿಸಿದ್ದ ಸಿಸಿ ಕ್ಯಾಮರಾ ಹಲವಾರು ಢಕಾಯಿತಿ, ಕಳ್ಳರ ಸೇರಿದಂತೆ ಸಾಕಷ್ಟು ಅನೈತಿಕ ಹಾಗು ಅಕ್ರಮ ಚಟುವಟಿಕೆಗಳನ್ನು ಹೊಂದಿದವರ ಹೆಡೆಮುರಿ ಕಟ್ಟುವಲ್ಲಿ ಪೊಲೀಸ್ ಇಲಾಖೆಗೆ ಸಹಕಾರಿಯಾಗುತ್ತಿತ್ತು. ಇದೀಗ ಕಳೆದೈದು ವರ್ಷಗಳಿಂದ ಕೆಟ್ಟುಹೋಗಿರುವ ಕ್ಯಾಮರಾ ತನ್ನ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ ಬಹುತೇಕ ಪಟ್ಟಣದ ಮಧ್ಯಭಾಗದಲ್ಲಿ ದಿನಪೂರ್ತಿ ನಡೆಯುವ ವಿದ್ಯಮಾನಗಳ ಬಗ್ಗೆ ನಿಗಾಯಿಡಲು ಸಿಸಿ ಕ್ಯಾಮೆರಾ ಹೆಚ್ಚಿನ ಅನುಕೂಲವಾಗಿತ್ತು. ಇದೀಗ ಕೆಟ್ಟು ಹೋಗಿದ್ದು ಇದುವರೆಗೂ ಸಂಬಂಧಪಟ್ಟವರು ದುರಸ್ಥಿ ಮಾಡಿಸುವ ಗೋಜಿಗೂ ಹೋಗಿಲ್ಲ. ಹೀಗಾಗಿ ಮುಖ್ಯ ಮಾರುಕಟ್ಟೆಯಾದ ಮಂಗಳವಾರ ಪೇಟೆ, ಬಸ್ ನಿಲ್ದಾಣ, ಗಾಂಧಿ ವೃತ್ತದಲ್ಲಿ ಕಳ್ಳರಿಗೆ ವರದಾನವಾದಂತಾಗಿದೆ. ಸಾರ್ವಜನಿಕರಿಂದ ವಿದ್ಯುತ್ ಬಿಲ್: ಖಾಸಗಿ ಕಟ್ಟಡಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗೆ ಸಂಬಂಧಿಸಿದ ಮಾಸಿಕ ವಿದ್ಯುತ್ ಬಿಲ್‍ನ್ನು ಸಂಬಂಧಿಸಿದ ಇಲಾಖೆಗಳಾದ ನಗರಸಭೆ ಅಥವಾ ಪೊಲೀಸ್ ಠಾಣೆಯಿಂದ ಭರಣಾ ಮಾಡದೆ ಆಯಾ ಖಾಸಗಿ ಕಟ್ಟಡಗಳ ಮಾಲಿಕರೇ ಪ್ರತಿ ತಿಂಗಳು 1000 ರಿಂದ 1200 ರೂ.ಗಳವರೆಗೆ ವಿದ್ಯುತ್ ಬಿಲ್‍ನ್ನು ಕಳೆದ 12 ವರ್ಷಗಳಿಂದ ಪಾವತಿಸುತ್ತಾ ಬಂದಿದ್ದು ಇದೆ. ಇದೀಗ ಕ್ಯಾಮರಾ ಕೆಟ್ಟು ಹೋಗಿರುವ ಕಾರಣ ಬಿಲ್ ಪಾವತಿಯಾಗುತ್ತಿಲ್ಲ. ಇದರಿಂದ ಮನೆ ಮಾಲಿಕರಿಗೆ ನುಂಗಲಾರದ ತುತ್ತಾಗುತ್ತಿದೆ. ಇದೆಲ್ಲವನ್ನೂ ಪರಿಪೂರ್ಣ ನಿರ್ವಹಣೆಯನ್ನು ಸಂಬಂಧಿಸಿದ ಇಲಾಖೆ ಮಾಡಬೇಕಿದೆ. ಪೊಲೀಸ್ ಇಲಾಖೆಯು ಈಗಾಗಲೇ ಸ್ಥಳೀಯ ನಗರಸಭೆಗೆ ಸಿಸಿ ಕ್ಯಾಮರಾ ಅಳವಡಿಕೆಯ ಬಗ್ಗೆ ಮಾಹಿತಿ ರವಾನಿಸಿ ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ ಪಟ್ಟಣಗಳ ಪ್ರಮುಖ ಬೀದಿಗಳಲ್ಲಿ ಕ್ಯಾಮರಾ ಅಳವಡಿಸುವಲ್ಲಿ ಮಾಹಿತಿಯನ್ನೂ ಒದಗಿಸಿದೆ. ಇದರ ವಿಳಂಬನೀತಿಗೆ ಕಾರಣ ಅರಿಯದಾಗಿದೆ. ` ಬನಹಟ್ಟಿ ಪೊಲೀಸ್ ಠಾಣೆಯಿಂದ ಕ್ಯಾಮರಾ ಅಳವಡಿಕೆ ಬಗ್ಗೆ ಮಾಹಿತಿ ಒದಗಿಸಿದ್ದು ಇದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ 15 ಲಕ್ಷ ರೂ.ಗಳ ವೆಚ್ಚದಲ್ಲಿ 50 ಕ್ಯಾಮರಾ ನಗರಸಭೆ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸುವಲ್ಲಿ ಯೋಜನೆ ರೂಪಿಸಲಾಗಿದೆ.’------ಸಿದ್ದು ಹುಲ್ಲೋಳ್ಳಿ, ಉಪವಿಭಾಗಾಧಿಕಾರಿ, ಜಮಖಂಡಿ. `ಅನೈತಿಕ ಚಟುವಟಿಕೆಗಳ ತಾಣ ಹಾಗು ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅವಶ್ಯಕತೆಯಿರುವ ಕಾರಣ ಸ್ಥಳಗಳನ್ನು ಪರಿಶೀಲಿಸಿ ನಗರಸಭೆಗೆ ಒದಗಿಸಿದ್ದು ಇದೆ.’-----ಜೆ. ಕರುಣೇಶಗೌಡ, ವೃತ್ತ ನಿರೀಕ್ಷಕ. `ಅವಳಿ ನಗರಾದ್ಯಂತ ಸಿಸಿ ಕ್ಯಾಮೆರಾ ಅಳವಡಿಕೆಗೆ ಕೊರೊನಾ ಸಂಕಷ್ಟದಿಂದಾಗಿ ವಿಳಂಬವಾಗಿದೆ. ಮುಂದಿನ ಅನುದಾನಗಳಲ್ಲಿ ಮೊದಲ ಯೋಜನೆಯನ್ನು ಇದಕ್ಕಾಗಿಯೇ ಮೀಸಲಿರುಸಲಾಗುವದು.’----ಶ್ರೀನಿವಾಸ ಜಾಧವ, ಪೌರಾಯುಕ್ತರು, ರಬಕವಿ-ಬನಹಟ್ಟಿ.
Social Plugin