ನೀರು ರಸ್ತೆ ಮೇಲೆ ಹರಿದು ಲಕ್ಷ್ಮೀನಗರದ ಹೊಸ ಬಡಾವಣೆಯ ಜನರು ನೀರಿನಲ್ಲಿಯೇ ನಡೆದುಕೊಂಡು ಹೋಗುವ ಪರಸ್ಥಿತಿ ನಿರ್ಮಾಣವಾಗಿರುವುದು
ಧಾರಾಕಾರ ಮಳೆಗೆ ಭೂಮಿ ಜವಳು: ಮನೆಯೊಳಗೆ ಕಾರಂಜಿಯಂತೆ ಚಿಮ್ಮುತ್ತಿರುವ ನೀರು
ರಬಕವಿ-ಬನಹಟ್ಟಿ,ಸೆ27: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಧಾರಾಕಾರ ಮಳೆಗೆ ಅಂತರ್ಜಲ ಹೆಚ್ಚಾಗಿದೆ. ಕೆಲ ಜವಳು ಪ್ರದೇಶದಲ್ಲಿರುವ ಮನೆಗಳಲ್ಲಿ ನೀರು ಕಾರಂಜಿಯಂತೆ ಚಿಮ್ಮುತ್ತಿದ್ದರೆ, ಜವಳು ಹೊಂದಿರುವ ಭೂಮಿ ನೀರಿನಿಂದ ಜಲಾವೃತಗೊಂಡಿರುವದು ಸಾಮಾನ್ಯವಾಗಿದೆ.
ಬನಹಟ್ಟಿಯ ಲಕ್ಷ್ಮೀ ನಗರದಲ್ಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಿನಗಳಿಂದ ಜವಳು ಹತ್ತಿದ್ದು, ನೀರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾರ್ವಜನಿಕರಿಗೆ ಆತಂಕ ಸೃಷ್ಠಿಸಿದೆ. ಇಲ್ಲಿ ನಿರ್ಮಿಸಲಾಗಿರುವ ಹೊಸ ಬಡಾವಣೆಗಳು ಗುಡ್ಡದ ಸಮೀಪವಿರುವುದರಿಂದ ಗುಡ್ಡದಲ್ಲಿಂದ ಬಸಿದು ಬರುತ್ತಿರುವ ನೀರು ರಸ್ತೆಯ ತುಂಬೆಲ್ಲ ಹಳ್ಳದಂತೆ ಹರಿದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಅಲ್ಲದೇ ಇಲ್ಲಿನ ಜನರು ನಡೆದುಕೊಂಡು ಹೋಗಲು ಹರ ಸಾಹಸ ಪಡುತ್ತಿದ್ದಾರೆ.
ಬೇಸಿಗೆಯಲ್ಲಿ ನೀರಿಲ್ಲದೇ ಪರದಾಡುವಂತಾಗುತ್ತದೆ ಆದರೆ ಈ ಬಾರಿ ಸುರಿದ ಬಾರಿ ಮಳೆ ಲಕ್ಷ್ಮೀನಗರದ ಕೆಲವೊಂದು ಭಾಗಗಳಲ್ಲಿ ನೀರು ಭೂಮಿಯಿಂದ ಮೇಲೆ ಬರುವಂತೆ ಮಾಡುವುದರ ಮೂಲಕ ಅಲ್ಲಿನ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡಿದೆ. ಲಕ್ಷ್ಮೀನಗರದ ಹೊಸ ಬಡಾವಣೆಗಳಲ್ಲಿ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆ ಪ್ರಮಾಣ ಹೆಚ್ಚಾಗಿರುವದರಿಂದ ಮೊದಲೇ ಜವಳು ಪ್ರದೇಶದಲ್ಲಿ ನೂರಾರು ಮನೆಗಳು ವಾಸವಿವೆ. ಇವೆಲ್ಲ ಮನೆಗಳಲ್ಲಿನ ಕೊಳವೆ ಬಾವಿಗಳಿಂದ ನೀರು ಚಿಮ್ಮುತ್ತಿದ್ದರೆ, ಮನೆ ಸುತ್ತಲೆಲ್ಲ ನೀರು ನಿಂತ ಪರಿಣಾಮ ಗೋಡೆಗಳು ತೇವಾಂಶ ಹೊಂದಿರುವದು ಆತಂಕ ಸೃಷ್ಟಿಸುವಲ್ಲಿ ಕಾರಣವಾಗಿದೆ.----- ಪ್ರಕಾಶ ಬೆಲ್ಲಂ, ಲಕ್ಷ್ಮೀ ನಗರದ ನಿವಾಸಿ, ಬನಹಟ್ಟಿ

Social Plugin