ಕರ್ನಾಟಕ ಬಂದ್.....

ಮುಂದೆ.....
ಇನ್ನೊಂದಿಷ್ಟು ಹೋರಾಟ ಪ್ರತಿಭಟನೆ. 
ಮುಂದೆ....
 
ರೈತ - ಕನ್ನಡ - ದಲಿತ - ಕಾರ್ಮಿಕ  ಸಂಘಟನೆಗಳ ಇತ್ತ ಕಡೆ....

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ತ ಕಡೆ.....

ಸಾಮಾನ್ಯ ಜನ ಎತ್ತ ಕಡೆ...

ವಾಸ್ತವ ಸ್ಥಿತಿ ಏನು ?

ಏನೇ ಚಳವಳಿ ಪ್ರತಿಭಟನೆ ಬಂದ್ ಎಷ್ಟೇ  ಮಾಡಿದರು ಈಗಿನ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಈ ಮಸೂದೆಗಳನ್ನು ಹಿಂಪಡೆಯುವ ಸಾಧ್ಯತೆ ತುಂಬಾ ಕಡಿಮೆ. ರಾಷ್ಟ್ರಪತಿಗಳು ಸಹಿ ಮಾಡಿದ್ದಾಯಿತು. ರಾಜ್ಯಪಾಲರು ಶೀಘ್ರದಲ್ಲೇ ಸಹಿ ಮಾಡಿಯೇ ಮಾಡುತ್ತಾರೆ. ಕೆಲವೇ ಅಪರೂಪದ ಸಂದರ್ಭ ಬಿಟ್ಟರೆ ಇಲ್ಲಿಯವರೆಗೂ  ಬಹುತೇಕ ಯಾವ ಪ್ರತಿಭಟನೆಗಳಿಗು  ಹೆದರಿ ಆಡಳಿತ ಸರ್ಕಾರಗಳು ತಮ್ಮ ನಿಲುವು ಬದಲಾಯಿಸುವುದಿಲ್ಲ.

ಅದರಲ್ಲೂ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಬಲಪಂಥೀಯ ಸಿದ್ದಾಂತದ ಪಕ್ಷದ ಬಳಿ ಇದೆ. ಅವರು ಪ್ರತಿಪಾದಿಸುವ ಮತ್ತು ಪ್ರಣಾಳಿಕೆಯ ಘೋಷಣೆಯೇ ಮುಕ್ತ ಮಾರುಕಟ್ಟೆ ಮತ್ತು ಖಾಸಗೀಕರಣದ ಪರವಾಗಿರುವುದು. ಅದನ್ನು ಅವರು ಮಾಡಿಯೇ ತೀರುತ್ತಾರೆ. ಸಾಕಷ್ಟು ಜನರ ಮತ್ತು ಮಾಧ್ಯಮಗಳ ಬೆಂಬಲವೂ ಇರುವಾಗ ಅವರು ಹಿಂತೆಗೆಯುವ ಪ್ರಶ್ನೆಯೇ ಇಲ್ಲ. ಬದಲಾಗಿ ವಿರೋಧ ವ್ಯಕ್ತಪಡಿಸುವವರ ಮೇಲೆಯೇ ಆರೋಪಗಳನ್ನು ಮಾಡುತ್ತಾರೆ.

ಎಲ್ಲರಿಗೂ ಗೊತ್ತಿದೆ ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ. ಬಹುಮತವೇ ಇಲ್ಲಿ ಸತ್ಯ. ಬಂದ್ ಮತ್ತು ಪ್ರತಿಭಟನೆ ಒಂದು ಅಸ್ತ್ರ ಮಾತ್ರ. ಅದರಿಂದ ತುಂಬಾ ಹೆಚ್ಚಿನ ಉಪಯೋಗ ಆಗುವುದಿಲ್ಲ. ಹಾಗೆಂದು ಭವಿಷ್ಯದಲ್ಲಿ ರೈತರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸುವುದು ಹೇಗೆ. ಸರ್ಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ. ಕಾನೂನುಗಳು ಶಾಶ್ವತವಾಗಿ ಉಳಿಯುತ್ತದೆ. ಒಂದು ವೇಳೆ ಸರ್ಕಾರ ಬದಲಾದರೆ ಮತ್ತೆ ತಿದ್ದುಪಡಿ ಮತ್ತೆ ಇನ್ನೊಂದು ಕಡೆಯಿಂದ ಪ್ರತಿಭಟನೆ ಹೋರಾಟ...

ಸಾಮಾನ್ಯ ಜನರಿಗೆ ಯಾವುದು ಸರಿ ಯಾವುದು ತಪ್ಪು ಯಾವುದು ಮಾರಕ ಎಂದು ಯೋಚಿಸುವಷ್ಟು ವಿವೇಚನೆಯೂ ಇಲ್ಲ, ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ. ಈ ಕ್ಷಣದ ಬದುಕಿನ ಬವಣೆಗಳೇ ಮುಖ್ಯ.

ನಿಜಕ್ಕೂ ಸಮಗ್ರ ಚಿಂತನೆಯ ಕೃಷಿಗೆ ಸಂಬಂಧಿಸಿದ ತಜ್ಞರು ಭಾರತೀಯ ಜನರ ಮನಸ್ಥಿತಿಗೆ ತಕ್ಕಂತೆ ನೀತಿ ನಿಯಮಗಳನ್ನು ಜಾರಿಗೆ ತರಬೇಕು. ಆದರೆ ರಾಜಕೀಯ ವ್ಯವಸ್ಥೆ ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಕೇವಲ ಅಧಿಕಾರದ ಹಪಾಹಪಿ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಯಾರಿಗೆ ಯಾವುದು ಲಾಭವೋ, ಯಾರ ಬಳಿ ಹೆಚ್ಚು ಬಹುಮತದ ಶಕ್ತಿ ಇದೆಯೋ ಅದಕ್ಕೆ ತಕ್ಕಂತೆ ಕಾನೂನು ರೂಪಿಸಿ ಅವಕಾಶವಾದಿತನ ಮೆರೆಯುತ್ತಾರೆ. ಕೃಷಿ, ಭಾಷೆ, ನೆಲ, ಜಲ ಮುಂತಾದ ಎಲ್ಲಾ ವಿಷಯಗಳಿಗು ಇದು ಅನ್ವಯ.

ಈ ಸಂದರ್ಭದಲ್ಲಿ ಒಂದು ಕಥೆ ನೆನಪಾಗುತ್ತಿದೆ.....

ಒಂದು ಊರಿನಲ್ಲಿ ಬಲ-ಎಡ ಗಳೆಂಬ ಸ್ವಂತ ಅಣ್ಣ ತಮ್ಮಂದಿರು ಇದ್ದರು.
ಕಾರಣಾಂತರಗಳಿಂದ ಚಿಕ್ಕವರಿರುವಾಗಲೇ ಇಬ್ಬರೂ ಬೇರೆ ಬೇರೆ ಯಾದರು.
ಬಲ ನಗರದ ಶ್ರೀಮಂತರ ಮನೆ ಸೇರಿ ವಿದ್ಯಾವಂತನಾದ.
ಎಡ ಹಳ್ಳಿಯ ಬಡವರ ಮನೆ ಸೇರಿ ಕೂಲಿ ಕಾರ್ಮಿಕನಾದ.

ಮುಂದೆ ಹೀಗೆ ಬೆಳೆದು ದೊಡ್ಡವರಾದರು.

ಇಬ್ಬರಿಗೂ ಸೇರಿದ ಜಮೀನು ಹುಟ್ಟಿದೂರಿನಲ್ಲಿತ್ತು. 
ನಗರದಲ್ಲಿ ಬೆಳೆದ ಹಣವಂತ ಬಲ ಆ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದ. 

ಹೇಗೂ ತಮ್ಮ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದಾನೆ. ಅದೇ ಕೂಲಿ ಅವನಿಗೆ ನೀಡಿ ನಮ್ಮದೇ ಜಮೀನಿನಲ್ಲಿ ದುಡಿಸಿಕೊಳ್ಳೋಣ ಎಂದು ನಿರ್ಧರಿಸಿ ಎಡನನ್ನು ಅವನದೇ ಜಮೀನಿಗೆ ಕೂಲಿ ಕಾರ್ಮಿಕನನ್ನಾಗಿ ನೇಮಿಸಿದ.

ಎಲ್ಲಾದರೂ ದುಡಿಯಬೇಕು, ಈಗ ನನ್ನ ಬಳಿ ಹಣ ಇಲ್ಲ.  ಬಲ ನಮ್ಮವನೆ ಇರಲಿ ಎಂದು ಒಪ್ಪಿಕೊಂಡ ಹಳ್ಳಿಯಲ್ಲಿ ಬೆಳೆದ ಬಡವ ತಮ್ಮ ಎಡ.

ಜಮೀನಿನ ಖರ್ಚು, ವೆಚ್ಚ, ಲಾಭ ನಷ್ಟಗಳು ಬಲನಿಗೆ ಸೇರಿದರೆ
ವಾರಾಂತ್ಯದ ಕೂಲಿ ಮಾತ್ರ ಎಡನಿಗೆ ಸಿಗುತ್ತಿತ್ತು. ಎಡನು ಹೆಚ್ಚು ನಿರೀಕ್ಷೆ ಇಲ್ಲದೆ ಅದರಲ್ಲೇ ತೃಪ್ತನಾಗಿದ್ದ. ಹೀಗೆ ಕಾಲ ಸರಿಯಿತು.

ಈಗೀಗ ನಗರ ಬುದ್ದಿಯ ಹಣ ಮಾಡುವ ದುರಾಸೆಗೆ ಬಿದ್ದ ಬಲ ಎಡನನ್ನು ಹೆಚ್ಚು ಹೆಚ್ಚು ದುಡಿಸಿಕೊಳ್ಳತೊಡಗಿದ. ಅದು ದೌರ್ಜನ್ಯದ ರೂಪ ಪಡೆಯಿತು. ಎಡನಿಗೆ ಒತ್ತಡ ಜಾಸ್ತಿಯಾಯಿತು.

ಆಧುನಿಕತೆಯಿಂದ ಎಡನಿಗೂ ಮೊಬೈಲ್ ಟಿವಿ ಸುದ್ದಿಗಳು ಇತರ ಸಂಘಟನೆ ಸಂಪರ್ಕಗಳ ಮಾಹಿತಿ ದೊರೆತು ಎಡನ ಮನಸ್ಥಿತಿ ಜಾಗೃತವಾಗಿ , ಈ ಜಾಗ ನನ್ನದು, ನನಗೂ ಪಾಲುಬೇಕು ಎಂದ.

ಇದನ್ನು ನಿರೀಕ್ಷಿಸಿರದ ಬಲ,
ಸಾಧ್ಯವಿಲ್ಲ, ಪಾಳುಬಿದ್ದ ಜಾಗಕ್ಕೆ
ಅಪಾರ ಹಣ ಸುರಿದಿದ್ದೇನೆ.

ಎಡನೆಂದ, ಹಗಲು ರಾತ್ರಿ ಇದನ್ನು ಫಲವತ್ತಾಗಿಸಲು 
ಬೆವರು ಸುರಿಸಿದ್ದೇನೆ.

ನಾನು ಕೂಲಿ ಕೊಟ್ಟಿದ್ದೇನೆ, 
ನಾನು ದುಡಿದಿದ್ದೇನೆ,
ನಾನು ಇಲ್ಲದಿದ್ದರೆ ಆ ಜಾಗವೇ ಉಳಿಯುತ್ತಿರಲಿಲ್ಲ,
ನಾನು ಇಲ್ಲದಿದ್ದರೆ ಆ ಜಾಗವೇ ಇರುತ್ತಿರಲಿಲ್ಲ.....

ಜಗಳ ದೊಡ್ಡದಾಯಿತು. ಹೊಡೆದಾಟದ ಹಂತಕ್ಕೆ ಹೋಯಿತು. 

ತಂತ್ರದಿಂದ ಎಡನನ್ನು ನಾಶಮಾಡಲು ಬಲ ಪ್ರಯತ್ನಿಸುತ್ತಿದ್ದಾನೆ.
ಆಕ್ರೋಶದಿಂದ ಬಲನನ್ನು ಮುಗಿಸಲು ಎಡ ಪ್ರಯತ್ನಿಸುತ್ತಿದ್ದಾನೆ.

ಇಬ್ಬರನ್ನೂ ನಾಶಮಾಡಿ ಉತ್ತರಾಧಿಕಾರಿಯೇ ಇಲ್ಲದ ಜಾಗವನ್ನು ಹೊಡೆಯಲು ಮೂರನೆಯವನೊಬ್ಬ ಕಾಯುತ್ತಿದ್ದಾನೆ.

ಎಚ್ಚರ ಎಚ್ಚರ....
ಇದರಿಂದ ಊಟಕ್ಕಿಲ್ಲದ ಪರಿಸ್ಥಿತಿ ನಮಗೆ ಬರದಿರಲಿ......

ಪರಸ್ಪರ ಸಹಕಾರ, ಸಮನ್ವಯ, ಪ್ರೀತಿ, ವಿಶ್ವಾಸ ಇಲ್ಲದಿದ್ದರೆ ಈ ಸಮಾಜವನ್ನು ನೆಮ್ಮದಿಯಾಗಿ ಕಟ್ಟಲು ಸಾಧ್ಯವೇ ಇಲ್ಲ. ಮುಕ್ತ ಮಾರುಕಟ್ಟೆ ಇರಲಿ, ನಿಯಂತ್ರಿತ ಮಾರುಕಟ್ಟೆ ಇರಲಿ.
ಮನುಷ್ಯ ಒಳ್ಳೆಯವನಾಗದೆ ಸ್ವಾರ್ಥಿ, ದುರಾಸೆ, ವಂಚಕನಾದರೆ ಎಲ್ಲವೂ ವಿನಾಶದತ್ತಲೇ ಸಾಗುತ್ತದೆ. ಮೊದಲು ನಾವು ಒಳ್ಳೆಯವರಾಗೋಣ.....

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಲೇಖನ - ವಿವೇಕಾನಂದ. ಹೆಚ್. ಕೆ.