ಹಿರಿಯ ಸಾಹಿತಿ, ಕಥೆಗಾರ ಅಬ್ಬಾಸ್ ಮೇಲಿನಮನಿ ಇನ್ನು ನೆನಪು ಮಾತ್ರ.
ರಬಕವಿ-ಬನಹಟ್ಟಿ,ಸೆ21: ನಾಡಿನ ಜನಪ್ರಿಯ ಕಥೆಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಬಾಗಲಕೋಟೆಯ ಕಥೆಗಾರ ಅಬ್ಬಾಸ್ ಮೇಲಿನಮನಿ ಅವರು, ಸಮಕಾಲೀನ ಪೀಳಿಗೆಯ ಕಥೆಗಾರರಲ್ಲಿ ಬಹುಮುಖ್ಯವಾದುದು. ಶರಣರು ಮೆಟ್ಟಿದ ನೆಲದಲ್ಲಿರುವ ಅಬ್ಬಾಸ್ ಅವರು, ಮೌಲ್ಯಗಳ ಬಿತ್ತು ಕಾಯಕವನ್ನು ತಮ್ಮ ಸಂವೇದನಶೀಲ ಕಥೆಗಳ ಮೂಲಕ ಮಾಡುತ್ತ್ತಾ ಬಂದಿದ್ದಾರೆ. ಇಂತಹ ವಿಶಿಷ್ಟವಾದ ಸಂವೇದನಶೀಲ ಕತೆಗಾರ ಅಬ್ಬಾಸ್ ಮೇಲಿನಮನಿ ಅವರು ಸೆ. 21 ಸೋಮವಾರ ನಮ್ಮನ್ನಗಲಿದರು, ಕನ್ನಡ ನಾಡಿನ ಸಾಹಿತ್ಯ ಲೋಕದ ನಕ್ಷತ್ರ ಕಳಚಿದಂತಾಗಿದೆ ಎಂದು ನಗರದ ಹಿರಿಯ ಸಾಹಿತಿಗಳು ಆದ ಮಲ್ಲಿಕಾರ್ಜುನ ಹುಲಗಬಾಳಿ ಹೇಳಿದರು.
ಅವರು ನಗರದಲ್ಲಿ ಬಸವ ಸಂಪದ ಬಳಗದಿಂದ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಮೂಲತಃ ಬಾಗಲಕೋಟೆಯವರಾದ ಅಬ್ಬಾಸ್ ಮೇಲಿನಮನಿ ಅವರು, 1954 ಮಾರ್ಚ 5 ರಂದು ಜನಿಸಿದ್ದಾರೆ. ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ನೇರ, ನಿಷ್ಠುರತೆಯ ಸ್ವಭಾವ ಹೊಂದಿದ ಅಬ್ಬಾಸ್ ಮೇಲಿನಮನಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಹೆಸರು ಗಳಿಸಿದವರು. ಯಾವುದೇ ಅಗ್ಗದ ಪ್ರಚಾರದ ಹಿಂದೆ ಬೀಳದ ಅವರು, ಇದ್ದದನ್ನು ಇದ್ದ ಹಾಗೇ ನೇರವಾಗಿ ಹೇಳುವ ಎದೆಗಾರಿಕೆ ಹೊಂದಿದ್ದರು. ನಿಷ್ಠುರತೆಯ ಕತೆಗಾರಾಗಿ ಗುರುತಿಸಿಕೊಂಡು ಸಾಹಿತ್ಯದ ಕೃಷಿಯನ್ನು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನೀಲಕಂಠ ದಾತಾರ, ಕಿರಣ ಆಳಗಿ, ಮಧುಕೇಶ್ವರ ಬೆಳಗಲಿ, ಮಹಾಶಾಂತ ಶೆಟ್ಟಿ, ಮಲ್ಲಿಕಾರ್ಜುನ ತುಂಗಳ, ಶಿವಾನಂದ ಮಹಾಬಳಶೆಟ್ಟಿ, ಬಸಯ್ಯ ವಸ್ತ್ರದ, ಚಿದಾನಂದ ಕಾರಜೋಳ, ವಿಶ್ವಜ ಕಾಡದೇವರ ಸೇರಿದಂತೆ ಅನೇಕರು ಇದ್ದರು.
Social Plugin