ಖಾಲಿ ಕುರ್ಚಿಗಳಿಂದಲೇ ದಿನಂಪ್ರತಿಯಿರುವ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಕಚೇರಿ.

ಸಿಬ್ಬಂದಿಯೇ ಇಲ್ಲದ ಕಚೇರಿಗೆ `ಅಧ್ಯಕ್ಷ ಪಟ್ಟ’

-ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ,ಸೆ21: ಕಚೇರಿ ಎಂದಾಕ್ಷಣ ಓರ್ವ ಸಿಬ್ಬಂದಿ ಕನಿಷ್ಠ ಸಿಪಾಯಿಯಾದರೂ ಅಧಿಕೃತವಾಗಿ ಬೇಕೇ ಬೇಕು. ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದಲ್ಲಿ ಕಳೆದ ಎರಡುವರೆ ದಶಕಗಳಿಂದಲೂ ಓರ್ವ ಸಿಬ್ಬಂದಿಯೂ ಇಲ್ಲ.

ಈಚೆಗೆ ಖಾಸಗಿ ಕೋಣೆಯೊಳಗೆ ವರ್ಗಾವಣೆಗೊಂಡ ಕಚೇರಿಗೆ ಅದೃಷ್ಟವಶಾತ್ ಅಧ್ಯಕ್ಷ ಸ್ಥಾನವೂ ನಿರ್ವಹಣೆಯಾಗುವಲ್ಲಿ ಕಾರಣವಾಗಿದೆ. ಕಳೆದ ಜುಲೈ ತಿಂಗಳಲ್ಲಿ ನೂತನ ಅಧ್ಯಕ್ಷರಾಗಿ ರಬಕವಿಯ ಈಶ್ವರ ನಾಗರಾಳ ನೇಮಕಗೊಂಡ ದಿನವೇ `ನೂತನ ಅಧ್ಯಕ್ಷರಿಗೆ ಸವಾಲಾದ `ಪ್ರಾಧಿಕಾರ ಕಚೇರಿ’ ಎಂಬ ಶೀರ್ಷಿಕೆಯಡಿ `ಸಂಯುಕ್ತ ಕರ್ನಾಟಕ’ ಸುದ್ದಿ ಭಿತ್ತರಿಸಿತ್ತು. ಇದನ್ನರಿತ ಸಂಬಂಧಿಸಿದ ಅಧಿಕಾರಿಗಳು ತರಾತುರಿಯಲ್ಲಿ ನೂತನ ಕಟ್ಟಡದಲ್ಲಿ ಸುಮಾರು 5 ಲಕ್ಷ ರೂ.ಗಳ ವೆಚ್ಚದಲ್ಲಿ ವಿನೂತನ ಕೋಣೆಗಳನ್ನು ನಿರ್ಮಿಸುವ ಮೂಲಕ ಸುಸಜ್ಜಿತ ಕಚೇರಿ ಮಾಡುವಲ್ಲಿ ಯಶಸ್ವಿ ಕಂಡು, ರಬಕವಿ-ಬನಹಟ್ಟಿ ತಾಲೂಕಿಗೆ ವರ್ಗಾಯಿಸಬೇಕಾಗಿದ್ದ ಕಾಗದ ಪತ್ರಗಳನ್ನು ಮಾತ್ರ ವರ್ಗಾಯಿಸಿ ಸಿಬ್ಬಂದಿ ನೇಮಕದಲ್ಲಿ ಮತ್ತೇ ತನ್ನ ಹಳೆಯ ಚಾಳಿ ತೋರಿಸುತ್ತಿರುವದು ರಬಕವಿ-ಬನಹಟ್ಟಿ ತಾಲೂಕಿನ ಜನತೆಯ ಕೆಂಗಣ್ಣಿಗೆ ಕಾರಣವಾಗಿದೆ.

ಇದಕ್ಕೆ ಸಂಬಂಧಿಸಿದ ಸದಸ್ಯ ಕಾರ್ಯದರ್ಶಿ ಜಮಖಂಡಿಯಿಂದಲೇ ನಿರ್ವಹಣೆ ಮಾಡುತ್ತ ಈ ಭಾಗದ ಜನತೆಗೆ ದೊರಕಬೇಕಾದ ಸೌಲಭ್ಯಗಳಿಗೆ ಸ್ಪಂದಿಸದೆ ಜನತೆ ತೀವ್ರ ಪರದಾಡುವಂತಾಗಿದೆ.

ಈ ನಗರ ಯೋಜನಾ ಪ್ರಾಧಿಕಾರಕ್ಕೆ ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ-ಯಲ್ಲಟ್ಟಿ-ಆಸಂಗಿ-ಅಸ್ಕಿ-ಜಗದಾಳ-ನಾವಲಗಿ-ಚಿಮ್ಮಡ-ಹಣಗಂಡಿ-ಹೊಸೂರ-ಯರಗಟ್ಟಿ-ಮದನಮಟ್ಟಿ ಹೀಗೆ ಹಲವಾರು ಗ್ರಾಮಗಳು ವ್ಯಾಪ್ತಿಗೆ ಬರುತ್ತವೆ.

ಈ ಭಾಗದ ಕಟ್ಟಡ ಪರವಾನಿಗೆ, ಕೆಜೆಪಿ, ಅನುಮತಿ ಪತ್ರ ಹೀಗೆ ಹಲವಾರು ಕಾರ್ಯಗಳಿಗೆ ಕಚೇರಿಗೆಂದು ಬಂದರೆ ವಾರದ ಒಂದು ದಿನ ಮಾತ್ರ ಬನಹಟ್ಟಿಯಲ್ಲಿ ಇಲ್ಲವಾದರೆ ಜಮಖಂಡಿ ಕಚೇರಿಗೆ ಹೋಗಿ ಎಂದು.

`ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿ ನೇಮಕಕ್ಕೆ ಸ್ಥಳಿಯ ಶಾಸಕ ಸಿದ್ದು ಸವದಿಯರೊಂದಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜರಿಗೆ ಭೆಟ್ಟಿ ನೀಡಿ ಕಾರ್ಯದರ್ಶಿ ಸೇರಿದಂತೆ ಎರಡು ಹುದ್ದೆಗಳಿಗೆ ಜರೂರ ನೇಮಕ ಮಾಡಬೇಕೆಂದು ಒತ್ತಾಯಿಸಲಾಗಿದೆ’.-----ಈಶ್ವರ ನಾಗರಾಳ, ಅಧ್ಯಕ್ಷ, ನಗರ ಯೋಜನಾ ಪ್ರಾಧಿಕಾರ.