ನಾವಲಗಿ ಗ್ರಾಮದಲ್ಲಿ ಬಚ್ಚಲು ಗುಂಡಿ, ಪೌಷ್ಟಿಕ ತೋಟ ನಿರ್ಮಾಣದ ಮಾಹಿತಿ ಒದಗಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಎಸ್.ವಿ. ಮಠದ.

ನರೇಗಾ ಯೋಜನೆಯಡಿ ಬಚ್ಚಲು ಗುಂಡಿ, ಪೌಷ್ಟಿಕ ತೋಟ ನಿರ್ಮಾಣಕ್ಕೆ ಸಹಾಯ ಧನ
ರಬಕವಿ-ಬನಹಟ್ಟಿ,ಸೆ29: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಚ್ಚಲು ಗುಂಡಿ ಹಾಗು ಪೌಷ್ಟಿಕ ತೋಟ ನಿರ್ಮಾಣಕ್ಕೆ ಸಹಾಯ ಧನ ನೀಡಲಾಗುತ್ತಿದ್ದು, ಗ್ರಾಮಸ್ಥರು ಇದರ ಸದ್ಬಳಕೆಯಿಂದ ಇಂಗು ಗುಂಡಿ ನಿರ್ಮಿಸಿಕೊಳ್ಳುತ್ತಿರುವದು ಸಂತಸವೆನಿಸುತ್ತಿದೆ ಎಂದು ಅಭಿವೃದ್ಧಿ ಅಧಿಕಾರಿ ಎಸ್.ವಿ. ಮಠದ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದಲ್ಲಿ ಪ್ರತಿ ಮನೆಗೊಂದು ಇಂಗು ಗುಂಡಿ ಕಾರ್ಯಕ್ರಮದಲ್ಲಿ ಇಂಗು ಗುಂಡಿ ಸ್ಥಾಪಿಸುವದರೊಂದಿಗೆ ಮಾತನಾಡಿದ ಅವರು, ನರೇಗಾ ವತಿಯಿಂದ ಇಂಗು ಗುಂಡಿ ಹಾಗು ಪೌಷ್ಟಿಕ ಕೃಷಿ ತೋಟ ನಿರ್ಮಾಣದ ಕಾಮಗಾರಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮದ ಜನತೆ ಸ್ವಸ್ಥ ಸಮಾಜ ಹೊಂದಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ಯೋಜನೆ ಜಾರಿಗೊಳಿಸಿದೆ. ಸುಮಾರು 14 ಸಾವಿರ ರೂ.ಗಳನ್ನು ಇಂಗು ಗುಂಡಿಗೆ ಸಹಾಯ ಧನ ನೀಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. 
ಮನೆಯ ನೀರನ್ನು ರಸ್ತೆ ಅಥವಾ ಮನೆಯ ಸುತ್ತ-ಮುತ್ತ ಹರಿಯಲು ಬಿಡವದರ ಬದಲಾಗಿ ತಮ್ಮ ಮನೆಯಲ್ಲೇ ಬಚ್ಚಲು ಗುಂಡಿ ನಿರ್ಮಿಸಿಕೊಂಡಲ್ಲಿ ಜಲ ಮರುಪೂರಣಗೊಳ್ಲಲಿದೆ. ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ ಸೊಳ್ಳೆ, ನೊಣಗಳು ಬರದಂತೆ ಸದಾ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಬಿ.ಎಚ್. ಗಾಯಕವಾಡ, ಬಿ.ಕೆ. ಗಿರಡ್ಡಿ, ಎಂ.ಎಸ್. ದೇಸಾಯಿ, ಶಿವಪ್ಪ ಬರಲಟ್ಟಿ ಸೇರಿದಂತೆ ಅನೇಕರಿದ್ದರು.